

ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ (ಸೆ.2) ಕಿಚ್ಚ ಸುದೀಪ್ 50ರ ವಸಂತಕ್ಕೆ ಕಾಲಿಡಲಿದ್ದು, ಬರ್ತಡೇಗೆ ಬಹಳಷ್ಟು ಸರ್ಪ್ರೈಸ್ಗಳು ಅಭಿಮಾನಿಗಳಿಗಾಗಿ ಕಾದಿವೆ. ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ನಾಳೆ ಶುಭಾಶಯಗಳ ಸುರಿಮಳೆಯೇ ಹರಿದುಬರಲಿದ್ದು, ಒಂದು ದಿನಕ್ಕೂ ಮುಂಚೆಯೇ ಚಿನ್ನದ ಹುಡುಗ ನೀರಜ್ ಚೋಪ್ರಾ, ಸುದೀಪ್ಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಒಲಿಂಪಿಕ್ಸ್ ಇತಿಹಾಸದಲ್ಲೇ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಮೊಟ್ಟಮೊದಲ ಬಾರಿಗೆ ಸ್ವರ್ಣ ಪದಕವನ್ನು ತಂದು ಕೊಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಚಿನ್ನದ ಹುಡುಗನೆಂದೇ ಖ್ಯಾತಿಯಾಗಿರುವ ಹರಿಯಾಣ ಮೂಲದ ನೀರಜ್ ಚೋಪ್ರಾ, ನಟ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ.
ನೀರಜ್ ವಿಶ್ ಮಾಡಿದ ಬೆನ್ನಲ್ಲೇ ಟ್ವಿಟರ್ನಲ್ಲಿ ವಿಕ್ರಾಂತ್ ರೋಣ ಚಿತ್ರ ಟ್ರೆಂಡ್ನಲ್ಲಿದೆ. ನೀರಜ್ ವಿಶ್ ಮಾಡಿರುವುದು ಸುದೀಪ್ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಆಗಿದ್ದು, ಹೆಚ್ಚು ಹೆಚ್ಚು ರೀಟ್ವೀಟ್ ಮತ್ತು ಲೈಕ್ಸ್ಗಳು ಸುರಿಮಳೆ ಹರಿದು ಬರುತ್ತಿದೆ. ಹೀಗಾಗಿ ಟ್ವಿಟರ್ನಲ್ಲಿ ವಿಕ್ರಾಂತ್ ರೋಣನ ಆರ್ಭಟ ಜೋರಾಗಿದೆ. ಇನ್ನು ನಾಳೆ ಕಿಚ್ಚನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಟ್ವಿಟರ್ನಲ್ಲಿ ನಾಳೆಯ ಮಟ್ಟಿಗೆ ಕಿಚ್ಚನ ಗುಣಗಾಣವೇ ಇರಲಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ವಿಕ್ರಾಂತ್ ರೋಣ ಚಿತ್ರತಂಡ ಶೇರ್ ಮಾಡಿಕೊಂಡಿದ್ದು, ಕಿಚ್ಚನಿಗೆ ಹುಟ್ಟುಹಬ್ಬ ಶುಭಕೋರಿರುವ ನೀರಜ್, ಮುಂಬರುವ ನಿಮ್ಮ ಚಿತ್ರಗಳಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿಚ್ಚ, ನಿಜಕ್ಕೂ ಇದು ಸ್ವೀಟೆಸ್ಟ್ ಶುಭಾಶಯ, ಧನ್ಯವಾದಗಳು ಸಹೋದರ. ನಿಮ್ಮ ಮೇಲೆ ನಮ್ಮ ಆಶೀರ್ವಾದ ಸದಾ ಇರುತ್ತದೆ. ಮತ್ತಷ್ಟು ಗುರಿಯನ್ನು ತಲುಪಿ ಎಂದು ಕಿಚ್ಚ ಹಾರೈಸಿದ್ದಾರೆ.
ಇನ್ನು ಸುದೀಪ್ ಅವರ ಬರ್ತಡೇ ಬಿಗ್ ಸರ್ಪ್ರೈಸ್ ನೀಡಲು ಚಿತ್ರತಂಡ ಭಾರಿ ಸಿದ್ಧತೆ ಮಾಡಿಕೊಂಡಿದೆ. ಕಿಚ್ಚನ ಬರ್ತಡೇಗೆ ವಿಕ್ರಾಂತ್ ರೋಣ ಚಿತ್ರತಂಡದ ಕಡೆಯಿಂದ ಡೆಡ್ಮ್ಯಾನ್ಸ್ ಥೀಮ್ ಸಾಂಗ್ ಹೊರಬೀಳಲಿದೆ. ಸೆಪ್ಟೆಂಬರ್ 2ರ ಬೆಳಗ್ಗೆ 11.5ಕ್ಕೆ ಟಿ ಸೀರೀಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಲಿದೆ. ಅಲ್ಲದೆ, ಬಿಗ್ಬಾಸ್ ಸ್ಪರ್ಧಿ ಹಾಗೂ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಬರೆದಿರುವ ವಿಶೇಷ ಹಾಡು ಕೂಡ ನಾಳೆ ಬಿಡುಗಡೆಯಾಗಲಿದೆ. (ದಿಗ್ವಿಜಯ ನ್ಯೂಸ್)