ವಿಕ್ಕಿ-ಕತ್ರಿನಾ ಮದುವೆಯ ನೇರಪ್ರಸಾರಕ್ಕೆ OTTಯಿಂದ 100 ಕೋಟಿ ರೂ. ಆಫರ್: ತಾರಾಜೋಡಿಯ ನಿಲುವೇನು?

Vickycat
Published on

ಮುಂಬೈ: ಬಾಲಿವುಡ್​ನಲ್ಲಿ ಮತ್ತೊಂದು ತಾರಾಜೋಡಿಯ ಅದ್ಧೂರಿ ಮದುವೆಗೆ ಕಲರ್​ಫುಲ್​ ವೇದಿಕೆ ಸಜ್ಜಾಗಿದೆ. ವಿಕಿ ಕೌಶಲ್ ಮತ್ತು ಕತ್ರಿನಾ ಕೈಫ್​ ಮದುವೆ ಸಂಭ್ರಮ ಇಂದಿನಿಂದ ಆರಂಭವಾಗಿದ್ದು, ಈ ವಿಚಾರ ಇದೀಗ ಟಾಕ್​ ಆಫ್​ ದಿ ಟೌನ್​ ಆಗಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಕೂಡ ಸೃಷ್ಟಿಯಾಗಿದೆ. ತಾರಾಜೋಡಿಯ ವಿವಾಹಕ್ಕೆ ಸಿನಿ ಉದ್ಯಮದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಭಾರೀ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಸಾಕಷ್ಟು ವಿಶೇಷತೆಗಳಿಗೆ ಸಾಕ್ಷಿಯಾಗಿರುವ ಈ ಮದುವೆಗೆ ಇದೀಗ ಭಾರೀ ಡಿಮ್ಯಾಂಡ್​ ಒಂದು ಒಲಿದು ಬಂದಿದೆ.

ಮದುವೆಗೆ ಸಂಬಂಧಿಸಿದ ವಿಡಿಯೋ ಫುಟೇಜ್​ ಸರೆಹಿಡಿಯುವ ಅವಕಾಶ ನೀಡಿದರೆ, 100 ಕೋಟಿ ರೂ. ಆಫರ್ ಮಾಡಲಾಗಿದೆಯಂತೆ. ಹೀಗೊಂದು ಸುದ್ದಿ ಬಾಲಿವುಡ್​ನಲ್ಲಿ ಹರಿದಾಡುತ್ತಿದೆ. ಮಾಧ್ಯಮ ವರದಿಯ ಪ್ರಕಾರ ಓಟಿಟಿ ಫ್ಲಾಟ್​ಫಾರ್ಮ್​ 100 ಕೋಟಿ ಆಫರ್​ ಮಾಡಿದೆಯಂತೆ. ಆದರೆ, ತಾರಾಜೋಡಿಯಿಂದ ಇದುವರೆಗೂ ಯಾವುದೇ ಗ್ರೀನ್​ ಸಿಗ್ನಲ್​ ಬಂದಿಲ್ಲ. ಓಟಿಟಿ ಎಂಬುದು ಬಾಲಿವುಡ್‌ನಲ್ಲಿ ಸಾಮಾನ್ಯ ಟ್ರೆಂಡ್ ಆಗಿದ್ದು, ಸೆಲೆಬ್ರಿಟಿಗಳು ಹಣಕ್ಕಾಗಿ ಪಾಪರಾಜಿಗಳಿಗೆ ತಮ್ಮ ಮದುವೆಯ ದೃಶ್ಯಗಳನ್ನು ಚಿತ್ರೀಕರಿಸಲು ಅನುಮತಿ ನೀಡುತ್ತಾರೆ.

ಇದೀಗ ದೇಶದಲ್ಲಿ ಎಲ್ಲೆಡೆ ಓಟಿಟಿ ಟ್ರೆಂಡ್​ ಸೃಷ್ಟಿಯಾಗಿದೆ. ಒಟಿಟಿ ವೇದಿಕೆಯಲ್ಲಿ ವಿಕ್ಕಿ-ಕರ್ತಿನಾರ ಅದ್ಧೂರಿ ಮದುವೆಯನ್ನು ಪ್ರಸಾರ ಮಾಡಲು ಆಸಕ್ತಿ ವಹಿಸಿದ್ದು, ಇದೇ ಮೊದಲ ಬಾರಿಗೆ ತಾರಾಜೋಡಿಯ ವಿವಾಹಕ್ಕಾಗಿ ಇಂಥದ್ದೊಂದು ಆಫರ್​ ಅನ್ನು ಓಟಿಟಿ ನೀಡಿದೆ. ಒಂದು ವೇಳೆ ತಾರಾಜೋಡಿ ಹಸಿರು ನಿಶಾನೆ ತೋರಿದ್ದಲ್ಲಿ ಇಡೀ ವಿವಾಹ ಸಂಭ್ರಮ ಒಟಿಟಿಯಲ್ಲಿ ನೇರಪ್ರಸಾರವಾಗಲಿದೆ. ಅಲ್ಲದೆ, ಫ್ರೆಂಡ್ಸ್​, ಆಪ್ತರು ಮತ್ತು ಸೆಲೆಬ್ರಿಟಿಗಳ ಎಕ್ಸ್​ಕ್ಲೂಸಿವ್​ ಸಂದರ್ಶನಗಳು ಕೂಡ ಪ್ರಸಾರವಾಗಲಿದೆ.

ಡಿಸೆಂಬರ್​ 9ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ವಿಕ್ಕಿಕ್ಯಾಟ್​ ಮದುವೆ ನಡೆಯಲಿದೆ. ಇಂದಿನಿಂದಲೇ ಮದುವೆ ಸಂಭ್ರಮ ಆರಂಭವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net