More

    ಎಟಿಎಂ ಯಂತ್ರಕ್ಕೇ ಸೈಬರ್ ಕಳ್ಳರ ಕನ್ನ!; ಡೇಟಾ ಕದ್ದು 13.50 ಲಕ್ಷ ರೂ. ವರ್ಗ, ಒಂದು ತಿಂಗಳಲ್ಲಿ 4 ಪ್ರಕರಣ

    | ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ಎಟಿಎಂ ಯಂತ್ರದ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹಾಕುವ ಜಾಗದಲ್ಲಿ ಸ್ಕಿಮ್ಮರ್ ಅಳವಡಿಸಿ ಕಾರ್ಡ್​ನಲ್ಲಿರುವ ಮಾಹಿತಿ ಕದಿಯುತ್ತಿದ್ದ ಸೈಬರ್ ಕಳ್ಳರೀಗ ಎಟಿಎಂ ಯಂತ್ರದಿಂದಲೇ ಡೇಟಾ ಕದ್ದು ಹಣ ಎಗರಿಸುವ ಹೊಸ ತಂತ್ರಗಾರಿಕೆ ಕಂಡುಕೊಂಡಿದ್ದಾರೆ. ಸೈಬರ್ ಖದೀಮರ ಈ ಹೊಸ ವರಸೆ ಪೊಲೀಸರಿಗೂ ತಲೆನೋವು ತರಿಸಿದೆ.

    ಅ.28 ರಿಂದ ನ.20ರ ನಡುವೆ ಬೆಂಗಳೂರಿನ ಕೆ.ಜಿ. ರಸ್ತೆ ಮತ್ತು ಗಾಂಧಿನಗರ ರಸ್ತೆಯಲ್ಲಿರುವ ಎಸ್​ಬಿಐ ಬ್ಯಾಂಕ್​ನ ಎಟಿಎಂ ಕೇಂದ್ರಕ್ಕೆ ತೆರಳಿದ ಸೈಬರ್ ಖದೀಮರು, ಯಂತ್ರಕ್ಕೆ ಪೆನ್​ಡ್ರೖೆವ್ ಹಾಕಿ, ಡೇಟಾ ವರ್ಗಾವಣೆ ಮಾಡಿಕೊಂಡು ನಂತರ ಪೆನ್​ಡ್ರೖೆವ್ ತೆಗೆದುಕೊಂಡು ಹೋಗಿದ್ದಾರೆ. ಇದಾದ ಮೇಲೆ ಕದ್ದ ಡೇಟಾ ಬಳಸಿಕೊಂಡು ಎಟಿಎಂಗಳಿಗೆ ಎಸ್​ಬಿಐ ಬ್ಯಾಂಕ್​ನ ಖಾತೆ ಲಿಂಕ್ ಮಾಡಿದ್ದಾರೆ. ನಂತರ ಆ ಖಾತೆಗಳಿಗೆ ಹಂತ ಹಂತವಾಗಿ ಆನ್​ಲೈನ್​ನಲ್ಲಿ ಹಣ ವರ್ಗ ಮಾಡಿಕೊಂಡಿದ್ದಾರೆ. ಇದೇ ರೀತಿ 4 ಎಟಿಎಂಗಳಿಗೆ ಪೆನ್​ಡ್ರೖೆವ್ ಹಾಕಿ ಡೇಟಾ ಕಳವು ಮಾಡಿ ಲಿಂಕ್ ಮಾಡಿಕೊಂಡು ಬೇರೆ ಬೇರೆ ದಿನಗಳಲ್ಲಿ 13.50 ಲಕ್ಷ ರೂ.ಗಳನ್ನು ಮತ್ತೊಂದು ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಅಕ್ರಮ ವಹಿವಾಟಿನ ಕುರಿತು ಸುಳಿವು ಪಡೆದ ಬಿನ್ನಿಪೇಟೆ ಸಮೀಪದ ಕೇಶವನಗರದ ಎಸ್​ಬಿಐ ಮುಖ್ಯ ಕಚೇರಿ ಅಧಿಕಾರಿ ಜೋಗಾರಾವ್, ಪಶ್ಚಿಮ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

    14.09 ಕೋಟಿ ರೂ. ವಂಚನೆ: ರಾಜ್ಯದಲ್ಲಿ 2019-20ನೇ ಆರ್ಥಿಕ ವರ್ಷದಲ್ಲಿ 4,058 ಪ್ರಕರಣ ದಾಖಲಾಗಿದ್ದು, 23.57 ಕೋಟಿ ರೂ. ಹಣ ಕಳುವಾಗಿದೆ. 2020-21ನೇ ಸಾಲಿನಲ್ಲಿ 4,079 ಕೇಸು ದಾಖಲಾಗಿ 14.09 ಕೋಟಿ ರೂ. ಕಳವಾಗಿದ್ದು, ಇದರ ಪ್ರಮಾಣ ಮತ್ತಷ್ಟು ಏರಿಕೆ ಆಗಲಿದೆ. 2020-21ನೇ ಆರ್ಥಿಕ ವರ್ಷದಲ್ಲಿ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಪ್ರಕರಣಗಳು (26,522) ದಾಖಲಾಗಿದ್ದು, 66.99 ಕೋಟಿ ರೂ. ಕಳವಾಗಿದೆ. ದೆಹಲಿಯಲ್ಲಿ 7,774 ಪ್ರಕರಣಗಳಲ್ಲಿ 18.95 ಕೋಟಿ ರೂ., ಹರಿಯಾಣದಲ್ಲಿ 5,605 ಕೇಸಿನಲ್ಲಿ 22.50 ಕೋಟಿ ರೂ. ಸೈಬರ್ ಕಳ್ಳರ ಪಾಲಾಗಿದೆ. ತಮಿಳುನಾಡು 4ನೇ ಸ್ಥಾನ, ಕರ್ನಾಟಕ 5ನೇ ಸ್ಥಾನದಲ್ಲಿವೆ.

    5 ವರ್ಷ, 90 ಕೋಟಿ ರೂಪಾಯಿ ರಿಕವರಿ: ದೇಶದಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್, ಇಂಟರ್​ನೆಟ್ ಬ್ಯಾಂಕಿಂಗ್ ಸೇವೆ ಹ್ಯಾಕ್ ಮಾಡಿ ಮತ್ತು ದತ್ತಾಂಶ ಕದ್ದು, ನಕಲಿ ಕಾರ್ಡ್ ಸೃಷ್ಟಿಸಿ ಸೈಬರ್ ಕಳ್ಳರು ಕಳವು ಮಾಡಿದ ಪ್ರಕರಣಗಳಲ್ಲಿ ಕಳೆದ 5 ವರ್ಷಗಳಲ್ಲಿ ಕೇವಲ 90 ಕೋಟಿ ರೂ. ಜಪ್ತಿ ಮಾಡಲಾಗಿದೆ. ಖಾಸಗಿ ಬ್ಯಾಂಕ್​ಗಳ ಗ್ರಾಹಕರ ಖಾತೆಗಳಿಗೆ ಸೈಬರ್ ಕಳ್ಳರು ಹೆಚ್ಚು ಕನ್ನ ಹಾಕುತ್ತಿರುವುದು ಆರ್​ಬಿಐ ವರದಿಯಲ್ಲಿ ಬಹಿರಂಗವಾಗಿದೆ.

    ಸೈಬರ್ ತಜ್ಞರ ಮೊರೆ: ಇದು ಹೊಸ ಮಾದರಿ ವಂಚನೆ ಯಾಗಿದೆ. ಈ ಹಿನ್ನೆಲೆಯಲ್ಲಿ ಸೈಬರ್ ತಜ್ಞರಿಂದ ಮಾಹಿತಿ ಕೋರಲಾಗಿದೆ. ಎಟಿಎಂ ವಹಿವಾಟು ದತ್ತಾಂಶದ ಕುರಿತು ಜ್ಞಾನ ಇರುವ ಸೈಬರ್ ಕಳ್ಳರೇ ಕೃತ್ಯ ಎಸಗಿದ್ದಾರೆ. ಎಟಿಎಂ ಬೂತ್ ಹಿಂಭಾಗ ಡೋರ್ ಲಾಕ್ ಬಿಚ್ಚಿ, ಮತ್ತೊಂದು ಅಡಾಪ್ಟರ್ ಮೂಲಕ ಪೆನ್ ಡ್ರೖೆವ್ ಹಾಕಿ ದತ್ತಾಂಶ ಕಳವು ಮಾಡಿದ್ದಾರೆ. ಎಟಿಎಂ ಬಳಕೆದಾರರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದಾರೆ. ಆದರೆ, ವರ್ಗಾವಣೆ ಆಗಿರುವ ಬ್ಯಾಂಕ್ ಖಾತೆಯ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಎಟಿಎಂ ಬೂತ್​ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ದೃಶ್ಯಾವಳಿ ಸಹ ಪಡೆದು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕದ್ರಿ ಗೋಪಾಲನಾಥ್ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಅವರ ಪತ್ನಿ ಅಸ್ವಸ್ಥ; ಜಿಲ್ಲಾಧಿಕಾರಿಯಿಂದಲೇ ಚಿಕಿತ್ಸೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts