ಬಿಗ್​ಬಾಸ್​​​ 9ನೇ ಆವೃತ್ತಿ ಆರಂಭಕ್ಕೆ ತೆರೆಮರೆಯಲ್ಲಿ ಸಿದ್ಧತೆ: ಶುರು ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ....

BBK8
Published on

ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದಾದ ಬಿಗ್​ಬಾಸ್​ ಮತ್ತೆ ಕಿರುತೆರೆಗೆ ಅಪ್ಪಳಿಸಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಬಿಗ್​ಬಾಸ್​ ಸೀಸನ್​ 8 ಕಳೆದ ಆಗಸ್ಟ್​ನಲ್ಲಿ ಮುಕ್ತಾಯಗೊಂಡಿತ್ತು. ಇದೀಗ ಸೀಸನ್​ 9ರ ತಯಾರಿ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದೆ.

ಸೀಸನ್​ 8 ಕಲರ್ಸ್​ ಕನ್ನಡದ ಎಲ್ಲ ಟಿಆರ್​ಪಿ ದಾಖಲೆಗಳನ್ನು ಮುರಿದಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಕರೊನಾದಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ಸೀಸನ್​ 8 ಅನ್ನು ಮತ್ತೆ ಆರಂಭಿಸುವ ಮೂಲಕ ರಿಯಾಲಿಟಿ ಶೋ ಇತಿಹಾಸಲ್ಲಿ ಹೊಸ ದಾಖಲೆಯನ್ನು ಸಹ ಬಿಗ್​ಬಾಸ್​ ಬರೆಯಿತು. ಇದೀಗ 9ನೇ ಸೀಸನ್​ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಯಾವಾಗ ಶೋ ಆರಂಭವಾಗಲಿದೆ? ಮತ್ತು ಈ ಬಾರಿ ಯಾರು ಯಾರು ಶೋನಲ್ಲಿ ಸ್ಪರ್ಧಿಸಲಿದ್ದಾರೆ? ಎಂಬ ಕುತೂಹಲ ಮನೆ ಮಾಡಿದೆ.

ಇದೀಗ ಕೇಳಿಬಂದಿರುವ ಸುದ್ದಿಯ ಪ್ರಕಾರ ಬಿಬಿಕೆ 9ನೇ ಆವೃತ್ತಿಯು ಫೆಬ್ರವರಿಯ ಕೊನೆಯ ವಾರದಲ್ಲಿ ಟೆಲಿಕಾಸ್ಟ್​ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಇನ್ನು ಅಧಿಕೃತವಾಗಿ ಘೋಷಣೆಯಾಗಿಲ್ಲ. ಬಹುಶಃ ಮುಂದಿನ ಕೆಲವೇ ದಿನಗಳಲ್ಲಿ ಘೋಷಣೆ ಆಗಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಗ್​ಬಾಸ್ ಶೋ ತಯಾರಕರು ಕಿರುತೆರೆಯ ಟಾಪ್ ಸೆಲೆಬ್ರಿಟಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಸಂಪರ್ಕಿಸುತ್ತಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

ಜನವರಿಯಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂಬ ವದಂತಿ ಇತ್ತು. ಆದರೆ, ಶೋ ತಯಾರಕರು ತಮ್ಮ ಮನಸ್ಸನ್ನು ಬದಲಾಯಿಸಿದ್ದಾರೆಂದು ತೋರುತ್ತದೆ. ಸದ್ಯಸ ಮಾಹಿತಿಯ ಪ್ರಕಾರ ಬಿಗ್​ಬಾಸ್ ಶೋ ತಯಾರಕರು ಸೀಸನ್ 9ಕ್ಕಾಗಿ ಬಿಗ್​ಬಾಸ್​ ಮನೆಯ ನೋಟವನ್ನು ಬದಲಾಯಿಸುವಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net