

ಬೆಂಗಳೂರು: ಬಿಗ್ಬಾಸ್ ಸೀಸನ್ 8ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು (ಆಗಸ್ಟ್ 7) ಮತ್ತು ನಾಳೆ (ಆಗಸ್ಟ್ 8) ಸುಮಾರು 10 ತಾಸಿನ ಫಿನಾಲೆ ಕಾರ್ಯಕ್ರಮ ನಡೆಯಲಿದೆ. ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿಯೇ ನೆರವೇರಲಿದೆ. ಇದರ ನಡುವೆ ಈ ಬಾರಿ ಬಿಗ್ಬಾಸ್ ಟ್ರೋಫಿ ಯಾರ ಪಾಲಾಗಲಿದೆ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ.
ಯಾರು ಗೆಲ್ಲಬಹುದು ಎಂಬ ಲೆಕ್ಕಾಚಾರದ ಕಡೆಗೆ ನೋಡಿದಾಗ.. ಮನೆಯಲ್ಲಿ ಅರವಿಂದ್ ಕೆ.ಪಿ., ಮಂಜು ಪಾವಗಡ, ದಿವ್ಯಾ ಉರುಡುಗ, ವೈಷ್ಣವಿ ಗೌಡ ಮತ್ತು ಪ್ರಶಾಂತ್ ಸಂಬರಗಿ ಉಳಿದುಕೊಂಡಿದ್ದಾರೆ. ಅರವಿಂದ್ ಮತ್ತು ಮಂಜು ನಡುವೆ ಟ್ರೋಫಿಗಾಗಿ ತೀವ್ರ ಪೈಪೋಟಿ ನಡೆಯಲಿದೆಯಂತೆ. ಉಳಿದ ಮೂವರಲ್ಲಿ ದಿವ್ಯಾ ಅಥವಾ ವೈಷ್ಣವಿ ಗೌಡ ರನ್ನರ್ ಅಪ್ ಆಗಬಹುದು. ಉಳಿದಂತೆ ಪ್ರಶಾಂತ್ ಸಂಬರಗಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದ್ದಾರೆ ಎಂದು ಜಾಲತಾಣದಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ.
ತುಂಬಾ ಚರ್ಚೆಯಾಗುತ್ತಿರುವ ಪ್ರಕಾರ ಬಿಗ್ಬಾಸ್ ಟ್ರೋಫಿಯನ್ನು ಮಂಜು ಪಾವಗಡ ಗೆಲ್ಲಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಅನೇಕ ಕಾರಣ ಅಥವಾ ಲೆಕ್ಕಾಚಾರಗಳು ಹೀಗಿವೆ. ಇಡೀ ಸೀಸನ್ನಲ್ಲಿ ಬಿಗ್ಬಾಸ್ ಮನೆಯಲ್ಲಿ ಯಾರಾದರೂ ಜನರನ್ನು ಹೆಚ್ಚು ನಗಿಸಿದ್ದಾರೆಂದರೆ ಮೊದಲ ಸ್ಥಾನದಲ್ಲಿ ಮಂಜು ಪಾವಗಡ ನಿಲ್ಲುತ್ತಾರೆ. ಟಾಸ್ಕ್ ವಿಚಾರ ಬಂದಾಗಲೂ ಕೂಡ ಮಂಜು ಉತ್ತಮ ಪ್ರದರ್ಶನ ನೀಡಿದ್ದಾರೆ. ಮೊದಲೇ ಕಲರ್ಸ್ ಕನ್ನಡದ ಮಜಾ ಭಾರತ, ಕಾಮಿಡಿ ಕಿಲಾಡಿಗಳು ಮತ್ತು ಕೆಲವೊಂದು ಚಿತ್ರಗಳಲ್ಲಿ ನಟಿಸಿರುವ ಮಂಜು ನಗೆ ಸಾಗರವನ್ನೇ ಹರಿಸಿದ್ದು, ತುಂಬಾ ಜನಮನ್ನಣೆ ಗಳಿಸಿದ್ದಾರೆ. ಅಲ್ಲದೆ, ಮಂಜು ಪಾವಗಡ ಹಳ್ಳಿಯ ಹಿನ್ನೆಲೆಯುಳ್ಳು ಪ್ರತಿಭೆ ಹಾಗೂ ತುಂಬಾ ಶ್ರಮದಿಂದ ಬೆಳೆದು ಬಂದಂತಹ ವ್ಯಕ್ತಿಯಾಗಿರುವುದರಿಂದ ಸಹಜವಾಗಿಯೇ ಜನರಿಗೆ ಮಂಜು ಮೇಲೆ ಅನುಕಂಪ ಮೂಡಬಹುದು.
ಇಷ್ಟೇ ಅಲ್ಲದೆ, ಮಂಜುಗೆ ಬಿಗ್ಬಾಸ್ ಮನೆಯೊಳಗೆ ಬಹುತೇಕ ಸ್ಪರ್ಧಿಗಳ ಬೆಂಬಲವೂ ಇದೆ. ಶೋನಿಂದ ಹೊರಗೆ ಬಂದ ಶುಭಾ, ಶಮಂತ್ ಸೇರಿದಂತೆ ಅನೇಕರು ಮಂಜುಗೆ ವೋಟ್ ಮಾಡುವಂತೆ ಕೇಳಿದ್ದಾರೆ. ಮಜಾ ಭಾರತದ ತಂಡವೂ ಕೂಡ ಮಂಜು ಪರ ಮತಯಾಚಿಸಿದ್ದಾರೆ. ಇಷ್ಟೇ ಅಲ್ಲದೆ, ಬಹುದೊಡ್ಡ ಶಕ್ತಿ ಎನ್ನುವಂತೆ ಕರುನಾಡ ಚಕ್ರವರ್ತಿ ಶಿವಣ್ಣ ಮಂಜು ಪರ ಬ್ಯಾಟ್ ಬೀಸಿರುವುದು ಬಹುದೊಡ್ಡ ಲಾಭವಾಗಿ ಪರಿಣಮಿಸಿದರೆ ಅಚ್ಚರಿ ಪಡಬೇಕಿಲ್ಲ. ಹೀಗಾಗಿ ಈ ಎಲ್ಲ ಅಂಶಗಳಿಂದ ಮಂಜು ಕಡೆ ಒಲವು ಜಾಸ್ತಿಯಾಗಿದೆ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗಿದೆ.
ಅರವಿಂದ್ ಎರಡನೇ ಸ್ಥಾನ?
ಬೈಕ್ ರೇಸರ್ ಆಗಿರುವ ಕೆ.ಪಿ. ಅರವಿಂದ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದ್ದಾರೆ ಎಂಬ ಚರ್ಚೆಯು ಇದೆ. ಬಿಗ್ಬಾಸ್ ಬರುವುದಕ್ಕೂ ಮುಂಚೆ ಕೆ.ಪಿ. ಅರವಿಂದ್ ಜನರಿಗೆ ಅಷ್ಟಾಗಿ ಪರಿಚಯವಿರಲಿಲ್ಲ. ಆದರೂ ತಮ್ಮ ಅಮೋಘ ಪ್ರದರ್ಶನದೊಂದಿಗೆ ಬಿಗ್ಬಾಸ್ ಮನೆಯಲ್ಲಿ ಫೈನಲ್ ಪ್ರವೇಶಿಸಿ, ಬಲಿಷ್ಠ ಸ್ಪರ್ಧಿ ಮಂಜುಗೆ ತೀವ್ರ ಪೈಪೋಟಿ ನೀಡಿದ್ದಾರೆ. ದಿವ್ಯಾ ಉರುಡುಗ ಜತೆಗಿನ ಅವರ ಸಂಬಂಧವೂ ಕೂಡ ಜಾಲತಾಣದಲ್ಲಿ ಬಹು ಚರ್ಚೆಯಾಗಿ ಆರ್ಯವೀಯ ಎಂಬ ಕಪಲ್ ವರ್ಡ್ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿ ಮಾಡಿತು. ಜನರಿಗೆ ಅರವಿಂದ್ ಈ ಮುಂಚೆ ಯಾರೆಂಬುದೇ ಗೊತ್ತಿಲ್ಲ. ಆದರೆ, ಬಿಗ್ಬಾಸ್ನಿಂದ ಇಂದು ಅರವಿಂದ್ ಮನೆ ಮಾತಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿ ಬಳಗವು ಸೃಷ್ಟಿಯಾಗಿದೆ. ಅಲ್ಲದೆ, ಮಂಜು ಪಾವಗಡರನ್ನು ಹಿಂದಿಕ್ಕಿದರೆ ಅಚ್ಚರಿಯೂ ಪಡಬೇಕಿಲ್ಲ. ಇನ್ನು ಅರವಿಂದ್ ತಾವು ಪಟ್ಟಂತಹ ಶ್ರಮ ಮತ್ತು ಬೈಕ್ ರೇಸ್ನಲ್ಲಾದ ಅಪಘಾತದಿಂದ ದೇಹದ ಮೇಲಾದ ಪರಿಣಾಮ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ, ಸಿನಿಮಾ ಮತ್ತು ಜಾಹೀರಾತುಗಳಲ್ಲಿ ಸಾಹಸ ದೃಶ್ಯಗಳಲ್ಲಿ ಪ್ರಾಣ ಪಣಕ್ಕಿಟ್ಟು ನಟಿಸಿದರೂ ಅದರ ಕ್ರೆಡಿಟ್ ಮಾತ್ರ ಸೆಲೆಬ್ರಿಟಿಗಳಿಗೆ ಹೋಗುತ್ತಿತ್ತು ಎಂಬ ಕೆಲವೊಂದು ಭಾವುಕ ಘಟನೆಗಳನ್ನುಮ ಹೊರಹಾಕಿದ್ದಾರೆ. ಇವೆಲ್ಲವೂ ಅರವಿಂದ್ಗೆ ಪ್ಲಸ್ ಆಗಿದ್ದು, ಸದ್ಯ ಎರಡನೇ ಸ್ಥಾನದಲ್ಲಿದ್ದಾರೆ ಎನ್ನಲಾಗಿದೆ. ಆದರೂ, ಮಂಜು ಮೀರಿಸಿ ಟ್ರೋಫಿ ಗೆದ್ದರೂ ಅಚ್ಚರಿ ಪಡಬೇಕಿಲ್ಲ.
ಸದ್ಯ ಜಾಲತಾಣದಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವುದು ಮಂಜು ಮತ್ತು ಅರವಿಂದ್ ಹೆಸರು. ಮಂಜುಗೆ ಸೆಲೆಬ್ರಿಟಿಗಳು ಪ್ರಮುಖವಾಗಿ ಸಾಥ್ ನೀಡಿರುವುದು ವರವಾಗಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿಯೂ ಮಂಜು ಮತ್ತು ಅರವಿಂದ್ ಟ್ರೆಂಡ್ನಲ್ಲಿದ್ದು, ಇಬ್ಬರ ನಡುವಿನ ಪೈಪೋಟಿಯಲ್ಲಿ ಬಿಗ್ಬಾಸ್ ಟ್ರೋಫಿ ಯಾರಾ ಪಾಲಾಗಲಿದೆ ಎಂಬ ಕುತೂಹಲಕ್ಕೆ ನಾಳೆ ರಾತ್ರಿ ತೆರೆ ಬೀಳಲಿದೆ. (ಏಜೆನ್ಸೀಸ್)