

ಬೆಂಗಳೂರು: ಬಿಗ್ಬಾಸ್ ಸೀಸನ್ 8ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು (ಆಗಸ್ಟ್ 7) ಮತ್ತು ನಾಳೆ (ಆಗಸ್ಟ್ 8) ಸುಮಾರು 10 ತಾಸಿನ ಫಿನಾಲೆ ಕಾರ್ಯಕ್ರಮ ನಡೆಯಲಿದೆ. ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿಯೇ ನೆರವೇರಲಿದೆ. ಇದರ ನಡುವೆ ಈ ಬಾರಿ ಬಿಗ್ಬಾಸ್ ಟ್ರೋಫಿ ಯಾರ ಪಾಲಾಗಲಿದೆ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ.
ಕೊರನಾ ಲಾಕ್ಡೌನ್ನಿಂದ 75 ದಿನಗಳಿಗೆ ಮೊಟಕುಗೊಂಡು ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸುವ ಮೂಲ ಕನ್ನಡದ ಬಿಗ್ಬಾಸ್ ಶೋ ಹೊಸ ದಾಖಲೆಯನ್ನೇ ಬರೆದಿದೆ. ರೇಟಿಂಗ್ ವಿಚಾರದಲ್ಲೂ ಕಾರ್ಯಕ್ರಮ ಮುಂಚೂಣಿಯಲ್ಲಿದೆ. ಈ ವಿಚಾರದಲ್ಲಿ ನಟ ಸುದೀಪ್ ಅವರ ತುಂಬಾನೇ ಪ್ರಮುಖವಾದದ್ದು ಎಂದು ಹೇಳಿದರೆ ತಪ್ಪಾಗಲಾರದು.
ಈಗ ಯಾರು ಗೆಲ್ಲಬಹುದು ಎಂಬ ನೆಟ್ಟಿಗರ ಲೆಕ್ಕಾಚಾರದ ಕಡೆಗೆ ಬರೋಣ... ಸದ್ಯ ಮನೆಯಲ್ಲಿ ಅರವಿಂದ್ ಕೆ.ಪಿ., ಮಂಜು ಪಾವಗಡ, ದಿವ್ಯಾ ಉರುಡುಗ, ವೈಷ್ಣವಿ ಗೌಡ ಮತ್ತು ಪ್ರಶಾಂತ್ ಸಂಬರಗಿ ಉಳಿದುಕೊಂಡಿದ್ದಾರೆ. ಅದರಲ್ಲೂ ಅರವಿಂದ್ ಮತ್ತು ಮಂಜು ನಡುವೆ ಟ್ರೋಫಿಗಾಗಿ ತೀವ್ರ ಪೈಪೋಟಿ ನಡೆಯಲಿದೆಯಂತೆ. ಇಬ್ಬರಿಗೂ ಸಮನಾದ ಅಭಿಮಾನಿಗಳ ಬಳಗವೂ ಇದೆ.
ಕಳೆದ ಎರಡು ವಾರಗಳಲ್ಲಿ ಮಂಜು ಮತ್ತು ಅರವಿಂದ್ ವೋಟಿಂಗ್ನಲ್ಲೂ ಸಮನಾಗಿ ಬಂದು ನಿಂತಿದ್ದಾರೆನ್ನಲಾಗಿದೆ. ಬಹುಶಃ ಇಬ್ಬರ ನಡುವಿನ ಸ್ಪರ್ಧೆ ಟೈ ಆದರೂ ಆಗಬಹುದು ಎಂದು ನೆಟ್ಟಿಗರು ಅಂದಾಜಿಸಿದ್ದಾರೆ. ಒಂದು ವೇಳೆ ಇಬ್ಬರ ನಡುವೆ ಟೈ ಆದರೆ ಏನಾಗಬಹುದು ಎಂಬ ಪ್ರಶ್ನೆಗೆ ಉತ್ತರ ಮುಂದಿದೆ.
ಅರವಿಂದ್-ಮಂಜು ನಡುವಿನ ಸ್ಪರ್ಧೆ ಟೈ ಆದರೆ, ಬಹುಶಃ ಕಲರ್ಸ್ ಕನ್ನಡ ಬಹುಮಾನದ ಹಣವನ್ನು ಸಮನಾಗಿ ಇಬ್ಬರಿಗೂ ಹಂಚಬಹುದು ಮತ್ತು ದಿವ್ಯಾ ಉರುಡುಗ ಅಥವಾ ವೈಷ್ಣವಿ ಗೌಡ ಅವರನ್ನು ರನ್ನರ್ ಅಪ್ ಎಂದು ಘೋಷಿಸಬಹುದು. ಇದರಿಂದ ಮೂರನೇ ವ್ಯಕ್ತಿಗೂ ಲಾಭವಾಗಲಿದೆ ಎಂಬ ಲೆಕ್ಕಾಚಾರಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಚರ್ಚೆಯಾಗಿದೆ. ಆದರೆ, ಫಲಿತಾಂಶ ಏನಾಗಲಿದೆ ಎಂಬುದಕ್ಕೆ ನಾಳೆ ರಾತ್ರಿಯವರೆಗೂ ಕಾಯಬೇಕಿದೆ. (ಏಜೆನ್ಸೀಸ್)