ಪ್ರಶಾಂತ್​ ನೀಲ್​ vs ಶಾರುಖ್​ ಖಾನ್​! ಇದು ನಿಜವಾದ ಫೈಟ್​, ಯಾರು ಗೆಲ್ತಾರೆ ಗೆಸ್​ ಮಾಡಿ…

Prashanth Neel vs Shah Rukh Khan
Published on

ಹೈದರಾಬಾದ್​: ಝೀರೋ ಸಿನಿಮಾದ ಹೀನಾಯ ಸೋಲಿನ ಬಳಿಕ ಸುಮಾರು 5 ವರ್ಷಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದ ಬಾಲಿವುಡ್​ ಕಿಂಗ್​ ಶಾರುಖ್​ ಖಾನ್​, 2023ರಲ್ಲಿ ಪಠಾಣ್​ ಮತ್ತು ಜವಾನ್​ನಂತಹ ಬ್ಲಾಕ್​ ಬಸ್ಟರ್​ ಸಿನಿಮಾಗಳ ಮೂಲಕ ಅದ್ಧೂರಿಯಾಗಿ ರೀ ಎಂಟ್ರಿ ಕೊಟ್ಟರು. ಕರೊನಾ ಸಾಂಕ್ರಮಿಕ ಪರಿಣಾಮಕ್ಕೆ ಒಳಗಾಗಿ ತೀವ್ರ ನಷ್ಟದಲ್ಲಿದ್ದ ಬಾಲಿವುಡ್​ಗೆ ಶಾರುಖ್​ ಖಾನ್​ ಗೆಲುವು ಹೊಸ ತಿರುವು ನೀಡಿತು ಎಂಬುದು ಸಿನಿ ಪಂಡಿತರ ಲೆಕ್ಕಾಚಾರ.

2023ರಲ್ಲಿ ತೆರೆಕಂಡ ಮೂರನೇ ಸಿನಿಮಾ 'ಡಂಕಿ' ಮೂಲಕ ಶಾರುಖ್​ ಹ್ಯಾಟ್ರಿಕ್​ ಗೆಲುವು ನೀಡುತ್ತಾರೆ ಎಂದು ಭಾವಿಸಲಾಗಿತ್ತು. ಇದೇ ಮೊದಲಬಾರಿಗೆ ಲೆಜೆಂಡರಿ ನಿರ್ದೇಶಕ ರಾಜಕುಮಾರ್​ ಹಿರಾನಿ ಜತೆ ಶಾರುಖ್​ ಕೆಲಸ ಮಾಡಿದ್ದರಿಂದ ನಿರೀಕ್ಷೆ ಹೆಚ್ಚಾಗಿಯೇ ಇತ್ತು. ಆದೆ, ಡಂಕಿ ಸಿನಿಮಾ ಎಲ್ಲರ ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. ಬಾಕ್ಸ್​ಆಫೀಸ್​ನಲ್ಲಿ ಅಂದುಕೊಂಡ ಸಾಧನೆ ಮಾಡದೆ ನಿರಾಸೆ ಮೂಡಿಸಿತು. ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್​ ಸಿನಿಮಾದ ಬಿಡುಗಡೆಯು ಡಂಕಿ ಸಿನಿಮಾಗೆ ಸ್ಪರ್ಧೆ ಒಡ್ಡಿದ್ದರಿಂದ ಡಂಕಿ ಹಣ ಗಳಿಕೆಗೆ ನೇರ ಪರಿಣಾಮ ಬೀರಿತು.

ಅಂದಹಾಗೆ ಪ್ರಶಾಂತ್​ ನೀಲ್​ ಮತ್ತು ಶಾರುಖ್​ ಖಾನ್​ ಎದುರು-ಬದುರಾಗಿದ್ದು ಇದು ಎರಡನೇ ಬಾರಿ. ಡಂಕಿ ಸಿನಿಮಾ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 225 ಕೋಟಿ ರೂ. ಕಲೆಕ್ಸನ್​ ಮಾಡಿತು. ಇನ್ನೊಂದೆಡೆ ಸಲಾರ್​ ಸಿನಿಮಾ ಹಿಂದಿ ಆವೃತ್ತಿಯಲ್ಲಿ 150 ಕೋಟಿ ರೂ. ಗಳಿಸಿತು. ಸಲಾರ್​ ಸಿನಿಮಾ ಜಾಗತಿಕವಾಗಿ 600 ಕೋಟಿ ರೂ. ಸಂಪಾದಿಸಿದರೆ, ಡಂಕಿ ಸಿನಿಮಾ 475 ಕೋಟಿ ರೂ. ಗಳಿಕೆ ಮಾಡಿತು. ಹಿಂದಿನಂತೆ ಪ್ರಶಾಂತ್​ ನೀಲ್​ ಈ ಬಾರಿಯೂ ಶಾರುಖ್​ ಖಾನ್​ ವಿರುದ್ಧ ಗೆಲುವು ಸಾಧಿಸಿದರು. 2018ರಲ್ಲಿ ಶಾರುಖ್​ ಅವರ ಝೀರೋ ಸಿನಿಮಾದ ಎದುರು ನಟ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​ 1 ಬಿಡುಗಡೆಯಾಗಿ ಭರ್ಜರಿ ಯಶಸ್ಸು ಸಾಧಿಸಿತ್ತು.

ಕೆಜಿಎಫ್​ 1 ಹಿಂದಿ ಆವೃತ್ತಿಯಲ್ಲೇ 45 ಕೋಟಿ ರೂ. ಗಳಿಕೆ ಮಾಡಿ ಸೂಪರ್​ ಹಿಟ್​ ಎನಿಸಿಕೊಂಡಿತು. ಝೀರೋ ಸಿನಿಮಾ ಜಾಗತಿಕವಾಗಿ ಕೇವಲ 90 ಕೋಟಿ ರೂ. ಗಳಿಕೆ ಮಾಡುವ ಮೂಲಕ ಹೀನಾಯ ಸೋಲುಂಡಿತು. ಝೀರೋ ಮತ್ತು ಡಂಕಿ ಎರಡೂ ನಾಟಕ ಪ್ರಕಾರದ ಚಿತ್ರಗಳಾದ್ದರಿಂದ ಕೆಜಿಎಫ್​ ಮತ್ತು ಸಲಾರ್​ ಎದುರು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಶಾರುಖ್ ಅವರ ಅಭಿಮಾನಿಗಳು ಮತ್ತು ಬಾಲಿವುಡ್ ಪ್ರೇಕ್ಷಕರು ವಾದಿಸುತ್ತಿದ್ದಾರೆ.

ಪ್ರಶಾಂತ್ ನೀಲ್-ಶಾರುಖ್ ಖಾನ್ ಮತ್ತೊಮ್ಮೆ ಮಾಸ್ ಚಿತ್ರಗಳ ಮೂಲಕ ಮೂರನೇ ಬಾರಿ ಬಾಕ್ಸ್ ಆಫೀಸ್​ನಲ್ಲಿ ಮುಖಾಮುಖಿಯಾದರೆ ಆಗ ನಿಜವಾದ ಮಜಾ ಇರಲಿದೆ ಎನ್ನುತ್ತವೆ ಬಾಲಿವುಡ್ ಟ್ರೇಡ್ ಮೂಲಗಳು. ಮಾಸ್​ ಚಿತ್ರದ ಮೂಲಕ ಶಾರುಖ್​ ಮತ್ತು ಪ್ರಶಾಂತ್​ ನೀಲ್​ ಎದುರಾಗುತ್ತಾರಾ? ಹಿಂದಿನಿ ಸೋಲಿಗೆ ಶಾರುಖ್​ ಪ್ರತೀಕಾರ ತೀರಿಸಿಕೊಳ್ಳುತ್ತಾರಾ? ಪ್ರಶಾಂತ್​ ನೀಲ್​ಗೆ ಮಾಸ್​ ಚಿತ್ರದ ಮೂಲಕವೇ ಶಾರುಖ್​ ಟಕ್ಕರ್​ ಕೊಡುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಕಾಲವೇ ಉತ್ತರ ಕೊಡಲಿದೆ. ಆದರೆ, ಇಂಥದ್ದೊಂದು ಮುಖಾಮುಖಿಗೆ ಸಿನಿಪ್ರಿಯರು ಎದುರು ನೋಡುತ್ತಿರುವುದಂತೂ ಸತ್ಯ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net