

ಹೈದರಾಬಾದ್: ಪ್ರಭಾಸ್ ಸದ್ಯಕ್ಕೆ ಎರಡೆರೆಡು ಚಿತ್ರಗಳಲ್ಲಿ ಬ್ಯುಸಿ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರದಲ್ಲಿ ನಟಿಸುವುದರ ಜತೆಗೆ ಅವರು 'ಪ್ರಾಜೆಕ್ಟ್ ಕೆ' ಎಂಬ ಇನ್ನೊಂದು ಚಿತ್ರವನ್ನೂ ಅವರು ಅರ್ಧ ಮುಗಿಸಿದ್ದಾರಂತೆ. ಈ ಎರಡೂ ಚಿತ್ರಗಳ ಚಿತ್ರೀಕರಣ ಮುಗಿಯುವದಕ್ಕಿಂತ ಮುನ್ನವೇ ಅವರು ಇನ್ನೊಂದು ಚಿತ್ರವನ್ನು ಒಪ್ಪಿಕೊಂಡಿದ್ದು, ಈಗಾಗಲೇ ಚಿತ್ರೀಕರಣದಲ್ಲೂ ಭಾಗವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ನಟಿಸುತ್ತಿರುವ ಚಿತ್ರಗಳಲ್ಲದೆ ಪ್ರಭಾಸ್, ಇನ್ನೂ ಒಂದು ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಮಾರುತಿ ನಿರ್ದೇಶಿಸುತ್ತಿರುವ ಈ ಚಿತ್ರವು ಫ್ಯಾಮಿಲಿ ಡ್ರಾಮಾದಲ್ಲಿ ಪ್ರಭಾಸ್ಗೆ ಮೂವರು ನಾಯಕಿಯರು ಎಂದು ಹೇಳಲಾಗುತ್ತಿದೆ. ಈಗಾಗಲೇ ಚಿತ್ರದ ಮುಹೂರ್ತವಾಗಿದ್ದು, 10 ದಿನಗಳಿಂದ ಹೈದರಾಬಾದ್ನಲ್ಲಿ ಚಿತ್ರೀಕರಣ ಸಹ ನಡೆಯುತ್ತಿದೆಯಂತೆ. ಪ್ರಭಾಸ್ ಸಹ ಕೆಲವು ದಿನಗಳ ಹಿಂದೆಯೇ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ ಎಂಬ ಸುದ್ದಿ ಇದೆ.
ಇಷ್ಟಾದರೂ ಚಿತ್ರತಂಡದವರು ಯಾಕೆ ಈ ವಿಷಯವನ್ನು ಗೌಪ್ಯವಾಗಿಟ್ಟಿದ್ದಾರೆ ಎಂಬ ಪ್ರಶ್ನೆ ಬರುವುದು ಖಂಡಿತಾ. ಯಾವುದೇ ಕಾರಣಕ್ಕೂ ಚಿತ್ರದ ಬಗ್ಗೆ ಈಗಲೇ ಮಾತನಾಡಬಾರದು ಎಂದು ಪ್ರಭಾಸ್ ಚಿತ್ರತಂಡಕ್ಕೆ ತಾಕೀತು ಮಾಡಿದ್ದಾರೆ. ಏಕೆಂದರೆ, ಜನವರಿಯಲ್ಲಿ 'ಆದಿಪುರುಷ್' ಚಿತ್ರ ಬಿಡುಗಡೆಯಾಗಿದೆ. ಅದಲ್ಲದೆ ಬಿಡುಗಡೆಯಾಗಬೇಕಾದ ಇನ್ನೂ ಎರಡು ಚಿತ್ರಗಳಿವೆ. ಈ ಮೂರು ಚಿತ್ರಗಳು ಬಿಡುಗಡೆಯಾದ ನಂತರವಷ್ಟೇ ಈ ಚಿತ್ರ ಬಿಡುಗಡೆಯಾಗಲಿದೆ. ಹಾಗಿರುವಾಗ ಈಗಿನಿಂದಲೇ ಈ ಚಿತ್ರದ ಬಗ್ಗೆ ಸುದ್ದಿ ಮಾಡಿದರೆ, ಮಿಕ್ಕ ಚಿತ್ರಗಳಿಗೆ ಸಮಸ್ಯೆಯಾಗಬಹುದು ಎಂಬುದು ಪ್ರಭಾಸ್ ಅಭಿಮತವಂತೆ. ಹಾಗಾಗಿ, ಚಿತ್ರೀಕರಣ ಪ್ರಾರಂಭವಾದರೂ ಚಿತ್ರತಂಡ ಸುಮ್ಮನಿದೆ ಎಂದು ಹೇಳಲಾಗುತ್ತಿದೆ.
ಇನ್ನು, 'ಆದಿಪುರುಷ್' ಚಿತ್ರವು ಜನವರಿ 12ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಾಗಿ ಈಗಾಗಲೇ ಘೋಷಣೆಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅದೇ ದಿನ ಚಿತ್ರ ಬಿಡುಗಡೆಯಾಗುವುದು ಸಂಶಯ, ಚಿತ್ರತಂಡದವರು ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಚಿತ್ರತಂಡದವರು ಇದನ್ನು ಅಲ್ಲಗೆಳೆದಿದ್ದಾರೆ. ಅಂದುಕೊಂಡಂತೆಯೇ ಜನವರಿ 12ರಂದು ಚಿತ್ರ ಎಲ್ಲೆಡೆ ಬಿಡುಗಡೆಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.