ಇನ್‌ಸ್ಟಾಗ್ರಾಂನಲ್ಲಿ ಲೈವ್​ ಬಂದ ಧ್ರುವ ಸರ್ಜಾ ಹೇಳಿದ್ದೇನು?

Pogaru - Final
Published on

ಬೆಂಗಳೂರು: ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದ ಬಿಡುಗಡೆಯ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಮೊದಲು ಜನವರಿಯಲ್ಲಿ ಎಂದು ಹೇಳಲಾಗಿತ್ತು. ಕೊನೆಗೆ ಅದು ಫೆಬ್ರವರಿಗೆ ಶಿಫ್ಟ್​​ ಆಗಿತ್ತು. ಈ ಮಧ್ಯೆ, ಚಿತ್ರದ ಬಿಡುಗಡೆ ಏಪ್ರಿಲ್​ಗೆ ಪೋಸ್ಟ್​ಪೋನ್​ ಆಗಿದೆ ಎಂಬಂತಹ ಸುದ್ದಿಯೊಂದು ಕಳೆದೆರೆಡು ದಿನಗಳಿಂದ ಕೇಳಿಬಂದಿತ್ತು.

ಇದು ಸುಳ್ಳುಸುದ್ದಿ, ಫೆಬ್ರವರಿಯಲ್ಲೇ ಚಿತ್ರ ಬಿಡುಗಡೆ ಎಂದು ನಿರ್ಮಾಪಕ ಗಂಗಾಧರ್ ಹೇಳಿದರೂ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಏಪ್ರಿಲ್‌ನಲ್ಲಿ ಬಿಡುಗಡೆ ಎಂದು ಸುದ್ದಿಯಾಗಿತ್ತು. ಚಿತ್ರ ಮುಂದಕ್ಕೆ ಹೋಗಿದೆ ಎಂಬ ಕಾರಣಕ್ಕೆ, 'ಇನ್​ಸ್ಪೆಕ್ಟರ್​ ವಿಕ್ರಂ' ತಂಡದವರು ಫೆಬ್ರವರಿ 12ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.

ಅಂತೂ ಸೋಮವಾರ ಪ್ರಕರಣ ಸುಖಾಂತ್ಯವಾಗಿದೆ. ಈಗ ಸ್ವತಃ ಧ್ರುವ ಇದಕ್ಕೆಲ್ಲ ಫುಲ್‌ಸ್ಟಾಪ್ ಹಾಕಿದ್ದಾರೆ. 'ಪೊಗರು' ಚಿತ್ರದ ಬಿಡುಗಡೆಯ ಬಗ್ಗೆಯೇ ಮಾತನಾಡುವುದಕ್ಕೆ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದ ಅವರು, ಫೆಬ್ರವರಿ 19ರ ರಥಸಪ್ತಮಿ ಹಬ್ಬದಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

‘ಈಗಾಗಲೇ ಕರೊನಾಗೆ ಔಷಧಿ ಬಂದಿದೆ. ಹಾಗಾಗಿ ಭಯಬಿಟ್ಟು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ಆರ್ಧೀವಾದ ಮಾಡಿ. ಈ ಹಿಂದೆ ನನ್ನ ಚಿತ್ರಗಳು ಬಿಡುಗಡೆಯಾದಾಗ ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡು ಬರಬೇಡಿ ಎಂದಿದ್ದೆ. ಆದರೆ, ಈ ಬಾರಿ ನಿರೀಕ್ಷೆ ಇಟ್ಟುಕೊಂಡೇ ಬನ್ನಿ ಎಂದು ಹೆಮ್ಮೆಯಿಂದ ಹೇಳುತ್ತಿದ್ದೇನೆ. ಇದು ದುರಹಾಂಕಾರ ಅಥವಾ ಅತಿಯಾದ ವಿಶ್ವಾಸವಲ್ಲ. ನಿಜಕ್ಕೂ ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ಅಭಿಮಾನಿಗಳ ಇಷ್ಟು ದಿನಗಳ ಕುತೂಹಲ ಮತ್ತು ನಿರೀಕ್ಷೆಗಳಿಗೆ ತಕ್ಕ ಹಾಗೆ ಚಿತ್ರ ಮೂಡಿಬಂದಿದೆ’ ಎನ್ನುತ್ತಾರೆ.

‘ಪೊಗರು’ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸಿದ್ದು, ಧ್ರುವ ಜತೆಗೆ ರಶ್ಮಿಕಾ ಮಂದಣ್ಣ, ಧನಂಜಯ್, ರಾಘವೇಂದ್ರ ರಾಜಕುಮಾರ್ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net