

ಬೆಂಗಳೂರು: ಸುದೀಪ್ ಅಭಿನಯದ 'ಫ್ಯಾಂಟಮ್' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಎರಡು ಹಾಡುಗಳ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಚಿತ್ರಕ್ಕೆ ಕುಂಬಳಕಾಯಿ ಒಡೆಯಬಹುದಾಗಿದೆ. ಈ ಮಧ್ಯೆ, ಚಿತ್ರತಂಡದಿಂದ ಒಂದು ಸುದ್ದಿ ಬಂದಿದೆ.
ಅದೇನೆಂದರೆ, ಇದೇ 21ರ ಗುರುವಾರ ಸಂಜೆ ನಾಲ್ಕು ಗಂಟೆ ಮೂರು ನಿಮಿಷಕ್ಕೆ, ಚಿತ್ರತಂಡದಿಂದ ಒಂದು ದೊಡ್ಡ ಅಪ್ಡೇಟ್ ಸಿಗಲಿದೆ ಎಂದು ಹೇಳಲಾಗಿದೆ. ಹಾಗಂತ ಖುದ್ದು ಸುದೀಪ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ನಿಜಕ್ಕೂ ಇದೊಂದು ದೊಡ್ಡ ಘೋಷಣೆ. ಜನವರಿ 21ಕ್ಕೆ' ಎಂದಷ್ಟೇ ಹೇಳಿದ್ದಾರೆ. ಆದರೆ, ಆ ಘೋಷಣೆ ಏನಿರಬಹುದು ಎಂದು ಹೇಳದೆಯೇ ಅಭಿಮಾನಿಗಳ ತಲೆಗೆ ಹುಳಬಿಟ್ಟಿದ್ದಾರೆ.
'ಫ್ಯಾಂಟಮ್' ಚಿತ್ರದಲ್ಲಿ ಸುದೀಪ್ ಅವರು ವಿಕ್ರಾಂತ್ ರೋಣ ಎಂಬ ಪಾತ್ರ ಮಾಡಿದ್ದು, ಇದುವರೆಗೂ ಮಾಡದ ಒಂದು ವಿಭಿನ್ನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಹೈದರಾಬಾದ್, ಕೇರಳ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದ್ದು, ಮಾತಿನ ಭಾಗದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ.
'ಫ್ಯಾಂಟಮ್' ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಅವರೇ ಕಥೆ-ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ. ಚಿತ್ರವನ್ನು ಶಾಲಿನಿ ಆರ್ಟ್ಸ್ ಸಂಸ್ಥೆಯಡಿ ಜಾಕ್ ಮಂಜು ನಿರ್ಮಿಸಿದ್ದು, ಅಲಂಕಾರ್ ಪಾಂಡ್ಯನ್ ಸಹನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
ವಿಲಿಯಮಂ ಡೇವಿಡ್ ಅವರ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಅವರ ಸಂಗೀತವಿರುವ ಈ ಚಿತ್ರದಲ್ಲಿ ಸುದೀಪ್ ಜತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್ ಮುಂತಾದವರು ಅಭಿನಯಿಸಿದ್ದಾರೆ.