ಮೋಕ್ಷಿತಾ ಈಗ ನಿರ್ಭಯಾ; ಪಾರು ಖ್ಯಾತಿಯ ಬೆಡಗಿಗೆ ಒಲಿದು ಬಂದ ಅವಕಾಶ

Mokshitha
Published on

ಬೆಂಗಳೂರು: ಕಿರುತೆರೆಯಲ್ಲಿ ಬೇಡಿಕೆ ಸೃಷ್ಟಿಯಾದ ಬಳಿಕ ಹಿರಿತೆರೆಗೆ ಬರುವುದು ವಾಡಿಕೆ. ಅದೇ ರೀತಿ ‘ಪಾರು’ ಧಾರಾವಾಹಿ ಮೂಲಕವೇ ಹೆಂಗೆಳೆಯರ ಮನಸೆಳೆದ ಮೋಕ್ಷಿತಾ ಪೈ ಬೆಳ್ಳಿತೆರೆಗೆ ಬರಲು ಸಿದ್ಧತೆ ನಡೆಸಿದ್ದಾರೆ. ಈ ಹಿಂದೆಯೇ ಈ ಅವಕಾಶ ಒದಗಿ ಬಂದರೂ, ಅದು ಮುಂದೂಡಲ್ಪಟ್ಟಿತ್ತು. ಇದೀಗ ‘ನಿರ್ಭಯಾ-2’ ಶೀರ್ಷಿಕೆಯುಳ್ಳ ಸಿನಿಮಾಕ್ಕೆ ಅವರು ಆಯ್ಕೆಯಾಗಿದ್ದಾರೆ.

ಬಾಲಕೃಷ್ಣ ಕೆ.ಆರ್. ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ರಾಜು ಕುಣಿಗಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವುಳ್ಳ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಮೋಕ್ಷಿತಾ ನಟಿಸುತ್ತಿದ್ದು, ಶೀಘ್ರದಲ್ಲಿ ಶೂಟಿಂಗ್​ನಲ್ಲಿಯೂ ಪಾಲ್ಗೊಳ್ಳಲಿದ್ದಾರೆ. ‘ಶೀರ್ಷಿಕೆ ಹೇಳುವಂತೆ ಇದೊಂದು ಮಹಿಳೆಗೆ ಸಂಬಂಧಿಸಿದ ಸಿನಿಮಾ. ಕೆಲ ವರ್ಷಗಳ ಹಿಂದೆ ‘ನಿರ್ಭಯಾ’ ಅತ್ಯಾಚಾರ ಪ್ರಕರಣ ಇಡೀ ದೇಶವ್ಯಾಪಿ ಸದ್ದು ಮಾಡಿತ್ತು. ಆದರೆ, ಈ ಸಿನಿಮಾದಲ್ಲಿ ನಿರ್ದೇಶಕರು ಬೇರೆ ರೀತಿಯಲ್ಲಿ ಕಥೆ ಹೇಳಲಿದ್ದಾರೆ. ನನ್ನ ಪಾತ್ರ ಚಿಕ್ಕದಾಗಿದ್ದರೂ ಎಲ್ಲರ ನೆನಪಿನಲ್ಲಿ ಉಳಿಯಲಿದೆ. ಹೆಣ್ಣುಮಕ್ಕಳ ಮೇಲೆ ಕಟ್ಟದಾಗಿ ನಡೆದುಕೊಳ್ಳುವ ದುಷ್ಟರಿಗೆ ಪಾಠ ಕಲಿಸುವವಳಾಗಿ ನಾನಿಲ್ಲಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ.

ಈ ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ ಎಂಬ ವಿಚಾರವನ್ನು ನಿರ್ದೇಶಕ ರಾಜು ಹೇಳಿಕೊಂಡಿದ್ದಾರೆ. ‘ಮೊದಲಿಗೆ ‘ನಿರ್ಭಯಾ-2’ ಬರಲಿದೆ. ಅದಾದ ಬಳಿಕ ಇದರ ಪ್ರಿಕ್ವೆಲ್ ಕಥೆಯೂ ಸಿದ್ಧವಾಗಿದೆ. ಸಮಾಜದಲ್ಲಿ ನಡೆಯುತ್ತಿರುವ ಕೆಲ ಘಟನೆಗಳನ್ನು ಆಧರಿಸಿ ಕಾಲ್ಪನಿಕ ಕಥೆಯ ಮೂಲಕ ಸಂದೇಶ ಹೇಳುವ ಪ್ರಯತ್ನ ಚಿತ್ರದಲ್ಲಾಗಲಿದೆ’ ಎನ್ನುತ್ತಾರೆ. ಬಹುತೇಕ ಶೂಟಿಂಗ್ ಮುಕ್ತಾಯವಾಗಿದ್ದು, ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಅರ್ಜುನ್ ಕೃಷ್ಣ, ಹರೀಶ್, ಕುಸುಮ, ರಾಧಾ ರಾಮಚಂದ್ರ ಸೇರಿ ಹಲವರು ಪಾತ್ರವರ್ಗ ದಲ್ಲಿದ್ದಾರೆ. ಸುರೇಶ್ ಛಾಯಾಗ್ರಹಣ, ರಂಗ್ ಮಂಜು ಸಂಭಾಷಣೆ, ಆಕಾಶ ಪರ್ವ ಸಂಗೀತ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net