ಕೇವಲ 15ನೇ ವಯಸ್ಸಿನಲ್ಲಿ ಹೃದಯಸ್ತಂಭನಕ್ಕೆ ಬಲಿಯಾದ ಖ್ಯಾತ ಬಾಲ ಕಲಾವಿದ! Cardiac Arrest

Cardiac Arrest
Published on

Cardiac Arrest : ಪಾಕಿಸ್ತಾನದ ಮನರಂಜನಾ ಉದ್ಯಮವನ್ನು ಆಘಾತಕ್ಕೆ ದೂಡುವಂತಹ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಕೇವಲ 15ನೇ ವಯಸ್ಸಿನಲ್ಲಿ ಪ್ರಖ್ಯಾತ ಬಾಲನಟ ಹೃದಯಸ್ತಂಭನದಿಂದ ಕೊನೆಯುಸಿರೆಳೆದಿದ್ದಾನೆ.

ಮೃತ ಬಾಲನಟನನ್ನು ಉಮರ್ ಶಾ ಎಂದು ಗುರುತಿಸಲಾಗಿದೆ. ಹೃದಯಸ್ತಂಭನಕ್ಕೆ ಮೃತಪಟ್ಟಿರುವುದಾಗಿ ಪಾಕ್​ ಮಾಧ್ಯಮ ಡಾನ್ ವರದಿ ಮಾಡಿದೆ. ತನ್ನ ನಗು ಮತ್ತು ಪರದೆಯ ಮೇಲಿನ ಆಕರ್ಷಕ ನಟನೆಯಿಂದಲೇ ಹೆಸರುವಾಸಿಯಾಗಿದ್ದ ಉಮರ್​, ಸೋಮವಾರ (ಸೆ.15) ಮುಂಜಾನೆ ತಮ್ಮ ತವರು ಡೇರಾ ಇಸ್ಮಾಯಿಲ್ ಖಾನ್‌ನಲ್ಲಿ ಕಾರ್ಡಿಯಾಕ್​ ಅರೆಸ್ಟ್​ನಿಂದ ನಿಧನರಾದರು.

ಕುಟುಂಬ ಮತ್ತು ವೈದ್ಯಕೀಯ ವರದಿಗಳ ಪ್ರಕಾರ, ಉಮರ್ ಸಿಕ್ಕಾಪಟ್ಟೆ ವಾಂತಿಯಿಂದ ಬಳಲುತ್ತಿದ್ದರು. ಇದರಿಂದ ಶ್ವಾಸಕೋಶಕ್ಕೆ ದ್ರವದ ಅಂಶ ಪ್ರವೇಶಿಸಿದ ಪರಿಣಾಮ ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಯಿತು ಎನ್ನಲಾಗಿದೆ. ಅಲ್ಲದೆ, ಉಮರ್​ ಮನೆಯಲ್ಲಿ ವಿಷಪೂರಿತ ಹಾವು ಪತ್ತೆಯಾದ ಈ ಹಿಂದಿನ ಘಟನೆಯನ್ನು ಸಹ ಡಾನ್​ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಉಮರ್​ ಸಾವಿಗೂ ಹಾವು ಪತ್ತೆಗೂ ಇರುವ ಸಂಬಂಧ ಇನ್ನೂ ಸ್ಪಷ್ಟವಾಗಿಲ್ಲ.

ಉಮರ್​ ಅವರ ಹಿರಿಯ ಸಹೋದರ ಅಹ್ಮದ್ ಶಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸಾವಿನ ಸುದ್ದಿಯನ್ನು ಹಂಚಿಕೊಂಡಿದ್ದು, ಎಲ್ಲ ಅಭಿಮಾನಿಗಳು ಉಮರ್ ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ದುಃಖ ಸಮಯದಲ್ಲಿ ಕುಟುಂಬಕ್ಕಾಗಿ ಪ್ರಾರ್ಥಿಸುವಂತೆ ವಿನಂತಿಸಿದ್ದಾರೆ.

ನಮ್ಮ ಕುಟುಂಬದ ಪುಟ್ಟ ಹೊಳೆಯುವ ನಕ್ಷತ್ರ ಉಮರ್ ಶಾ, ಸರ್ವಶಕ್ತನಾದ ಅಲ್ಲಾಹನ ಬಳಿಗೆ ಮರಳಿದ್ದಾರೆ ಎಂದು ನಿಮಗೆ ತಿಳಿಸುತ್ತೇನೆ. ಎಲ್ಲರೂ ನಿಮ್ಮ ಪ್ರಾರ್ಥನೆಯಲ್ಲಿ ಉಮರ್​ ಅವರನ್ನು ಮತ್ತು ನಮ್ಮ ಕುಟುಂಬವನ್ನು ಸ್ಮರಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಅಹ್ಮದ್​ ಶಾ ಬರೆದಿದ್ದಾರೆ. ಇನ್ನು ಈ ಘಟನೆ​ ಕುಟುಂಬವನ್ನು ಕಾಡಿದ ಎರಡನೇ ದುರಂತವಾಗಿದೆ. ಈ ಹಿಂದೆ ಕಿರಿಯ ಸಹೋದರಿ ಆಯೇಷಾಳನ್ನು 2023ರ ನವೆಂಬರ್ ತಿಂಗಳಲ್ಲಿ ಕುಟುಂಬ ಕಳೆದುಕೊಂಡಿತು.

ಅಂದಹಾಗೆ, ಉಮರ್ ಸಾಮಾಜಿಕ ಜಾಲತಾಣದ ಸೆನ್ಸೇಷನ್ ಮತ್ತು ಕಿರುತೆರೆ ಲೋಕದ ಬಾಲನಟನಾಗಿ ಖ್ಯಾತಿ ಪಡೆದಿದ್ದರು. ಉಮರ್​ ಅವರು ತಮ್ಮ ಅಣ್ಣನ ಜೊತೆಗೆ ಪರದೆ ಹಂಚಿಕೊಂಡು ಮೋಡಿ ಮಾಡುವ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದರು. ಈ ಜೋಡಿ 'ಜೀತೋ ಪಾಕಿಸ್ತಾನ್' ಮತ್ತು 'ಶಾನ್-ಎ-ರಂಜಾನ್' ನಂತಹ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಮನೆಮಾತಾಯಿತು. ಆಗಾಗ್ಗ ವೇಷಭೂಷಣಗಳನ್ನು ಧರಿಸುತ್ತಿದ್ದ ಈ ಜೋಡಿ ಮುಗ್ಧ ಹಾಸ್ಯ, ವೈರಲ್ ಆದ "ಪೀಚೆ ಟೌ ದೇಖೋ" ರೀಲ್ ಸೇರಿದಂತೆ ವಿವಿಧ ಮನರಂಜನೆಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದರು. ಇನ್ನು ಉಮರ್​ ಸಾವಿಗೆ ಪಾಕಿಸ್ತಾನದ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net