

| ಡಾ. ಶ್ರೀನಿವಾಸ ಪ್ರಸಾದ್ ಡಿ.ಎಸ್
ವಿಷ್ಣುವರ್ಧನ, ವಿಷ್ಣುವರ್ಧನ ಎಂದು ಕೂಗಿ ಕರೆದರು ಭಾರತೀಯ ಮತ್ತು ಕನ್ನಡ ಚಿತ್ರರಂಗದ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರೆನ್ನಿಸಿದ್ದ ಪುಟ್ಟಣ್ಣ ಕಣಗಾಲ್. ಇದನ್ನು ಕೇಳಿ, 22 ವರ್ಷದ ಸಂಪತ್ ಕುಮಾರ್ಗೆ ಆಶ್ಚರ್ಯ. ಆಗ ಪುಟ್ಟಣ್ಣ, ‘ನೋಡು ಇವತ್ತಿನಿಂದ ನಿನ್ನ ಹೆಸರು ವಿಷ್ಣುವರ್ಧನ. ಹೊಯ್ಸಳರ ಪ್ರಸಿದ್ಧ ದೊರೆ ವಿಷ್ಣುವರ್ಧನ ಹೆಸರುವಾಸಿ ಆದವನು. ನೀನೂ ಸಹ ಅವನಂತೆಯೇ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುತ್ತೀಯ ಎಂದು’ ಹೊಸ ಹೆಸರಿಟ್ಟರು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಮಂಡ್ಯದ ಹುಚ್ಚೇಗೌಡ ಅಮರನಾಥ್ಗೂ ಹರಸಿದ ಪುಟ್ಟಣ್ಣ, ‘ನಿನ್ನ ಹೆಸರು ಇವತ್ತಿನಿಂದ ಅಂಬರೀಷ. ಈ ಚಿತ್ರದಿಂದ ನೀನು ಹೆಸರು ಗಳಿಸುವೆ’ ಎಂದು ಹರಸಿದರು. ಇದನ್ನು ಕೇಳಿ ಆಶ್ಚರ್ಯಗೊಂಡ ಅಮರನಾಥ್, ‘ಸರ್, ಸಂಪತ್ ಕುಮಾರ್ ಈ ಚಿತ್ರದ ನಾಯಕ. ಅವನಿಗೇನೋ ಹೆಸರು ಬಂದೇ ಬರುತ್ತೆ ನಿಜ. ಆದರೆ, ನಂದು ಪುಟ್ಟ ಪಾತ್ರ. ಅದೂ ನಾಯಕಿಯನ್ನು ಚುಡಾಯಿಸುವ ತರಲೆ ಪಾತ್ರ. ನನಗೆ ಹೆಸರು ಬರುತ್ತಾ? ಅಯ್ಯೋ ಹೋಗಿ ಸರ್ ...’ ಎಂದಿದ್ದರು.
ಆದರೆ, ಪುಟ್ಟಣ್ಣನವರ ಮಾತು-ಆಶೀರ್ವಾದ ಇಬ್ಬರ ವಿಷಯದಲ್ಲೂ ಸುಳ್ಳಾಗಲಿಲ್ಲ. ಅಂದು ಪುಟ್ಟಣ್ಣ ಹೊಸ ಹೆಸರು ಕರೆದಾಗ ಆಶ್ಚರ್ಯಚಕಿತರಾಗಿ ತಿರುಗಿ ನೋಡಿದ್ದ ಇವರಿಬ್ಬರೂ ಮುಂದೆ ಹಿಂದಿರುಗಿ ನೋಡದಂತೆ ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ವಿಷ್ಣುವರ್ಧನ್, ಅಂಬರೀಷ್ ಆಗಿ ಪ್ರತಿಷ್ಠಾಪಿತರಾಗಿ ಸುದೀರ್ಘವಾಗಿ ನೆಲೆಗೊಂಡರು. ನಾಯಕರಾಗಿ ವಿಷ್ಣು ಅವರ ಮೊದಲ ಚಿತ್ರ ‘ನಾಗರಹಾವು’ ನಿಜ. ಆದರೆ, ಅವರ ಮೊದಲ ಚಿತ್ರ ‘ವಂಶವೃಕ್ಷ’ ಮತ್ತು ಜನ್ಮನಾಮ ಸಂಪತ್ ಕುಮಾರ್ ಎಂದೇ ಚಿತ್ರದ ಪರದೆಯ ಮೇಲೆ ಕಾಣಿಸುತ್ತದೆ. ಆ ಚಿತ್ರದಲ್ಲಿ ವಿಷ್ಣುವರ್ಧನ್ ಅವರದ್ದು ಪುಟ್ಟ ಪಾತ್ರವಾದರೂ, ಅದರಲ್ಲಿ ಗಮನಸೆಳೆದಿದ್ದರು. ‘ನಾಗರಹಾವು’ ಚಿತ್ರದ 100ನೇ ದಿನದ ಸಮಾರಂಭಕ್ಕೆ ಆಗಮಿಸಿ ವಿಷ್ಣುವರ್ಧನ್ ಅವರನ್ನು ಅಭಿನಂದಿಸಿದ ಡಾ. ರಾಜಕುಮಾರ್, ‘ನೀವು ‘ವಂಶವೃಕ್ಷ’ದಲ್ಲಿ ಮಾಡಿದ್ದೀರ, ಚೂಯಿಂಗ್ ಗಮ್ ಉಗೀತಿರಲ್ಲ ... ನೋಡಿದ್ದೀನಿ. ಚೆನ್ನಾಗಿ ಮಾಡಿದ್ದೀರಿ, ಚೆನ್ನಾಗಿ ಮಾಡಿದ್ದೀರಿ ಎಂದು ವಿಷ್ಣು ಅವರನ್ನು ರಾಜ್ ಮನಸಾರೆ ಅಭಿನಂದಿಸಿದ್ದರು.
ರಾಜಕುಮಾರ್ ಅವರ 150ನೇ ಚಿತ್ರವಾದ ‘ಗಂಧದ ಗುಡಿ’, ವಿಷ್ಣುವರ್ಧನ್ ಅವರ ಐದನೇ ಚಿತ್ರವಾಗಿತ್ತು. ಅವರಿಬ್ಬರೂ ಜತೆಯಾಗಿ ನಟಿಸಿದ ಏಕೈಕ ಚಿತ್ರವದು. ಆದರೆ, ‘ಗಂಧದ ಗುಡಿ’ಯಲ್ಲಿ ಸಿಡಿದ ಗಂಧಕದ ವಿಷಯದಲ್ಲಿ ಅಲ್ಲೋಲ ಕಲ್ಲೋಲವಾಯಿತು. ಇದಕ್ಕೆ ಬಲಿಪಶುವಾದವರು ವಿಷ್ಣು ಎನ್ನುವುದು ದುರಂತ. ಇಲ್ಲದಿದ್ದರೆ ತೆಲುಗಿನಲ್ಲಿ ಎನ್ಟಿಆರ್-ನಾಗೇಶ್ವರರಾವ್ ಜತೆಯಾಗಿ ನಟಿಸಿದಂತೆ, ರಾಜ್-ವಿಷ್ಣು ಜೋಡಿಯ ಅನೇಕ ಸಿನಿಮಾಗಳು ಕನ್ನಡ ಬೆಳ್ಳಿತೆರೆಯ ಮೇಲೆ ರಾರಾಜಿಸುತ್ತಿದ್ದವು. ಹಾಗಾಗದೆ ವಿಷ್ಣು ಮುಂದೆ ಹಲ್ಲೆ, ಮಾನಸಿಕ ಹಿಂಸೆಗಳ ಬೆಂಕಿ ನಡಿಗೆಯಲ್ಲಿ ಬೆಂದರು. ಅವರ ಕುಟುಂಬ, ತಾಯಿ ಕಾಮಾಕ್ಷಮ್ಮನವರೂ ಇದರಿಂದ ನೊಂದ, ವಿದ್ಯಮಾನಗಳೂ ಜರುಗಿದ್ದವು. ವಿಷ್ಣು ಈ ಅವಧಿಯನ್ನು ಸುದೀರ್ಘವಾಗಿ ಅನುಭವಿಸುತ್ತಲೇ ಹೋದದ್ದು ಬಹಳ ದುಃಖದ ಘಟ್ಟ.
ರಾಜೇಂದ್ರಸಿಂಗ್ ಬಾಬು ನಿರ್ದೇಶನದಲ್ಲಿ ವಿಷ್ಣು, ‘ನಾಗರಹೊಳೆ’, ‘ಕಿಲಾಡಿ ಜೋಡಿ’, ‘ಬಂಧನ’, ‘ಮುತ್ತಿನ ಹಾರ’, ‘ಹಿಮಪಾತ’ ... ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದರು. ಆದರೆ, ‘ಬಂಧನ’ ಈ ಜೋಡಿಯ ಹಚ್ಚಹಸಿರಾದ ಚಿತ್ರ. ಡಾ.ಹರೀಶ್ ಆಗಿ ವಿಷ್ಣು ಮಾಡಿದ ಅಭಿನಯಕ್ಕೆ ಅಮಿತಾಭ್ ಬಚ್ಚನ್, I Can't act like this Man ಅಂದಿದ್ದರೆ, ಡಾ. ರಾಜಕುಮಾರ್ ಎರಡೂ ಕೈಜೋಡಿಸಿ ಮೆಚ್ಚಿದ್ದರು. ಪುಟ್ಟಣ್ಣ ಸಹ ತಮ್ಮ ರಾಮಾಚಾರಿಯ ಅಭಿನಯವನ್ನು ಈ ಚಿತ್ರದಲ್ಲಿ ಕಂಡು ಆನಂದತುಂದಿಲರಾಗಿದ್ದರು. ಧಮೇಂದ್ರ ಸಹ ವಿಷ್ಣು ಅವರ ಅಭಿನಯವನ್ನು ಮೆಚ್ಚಿದ್ದರು. ‘ಬಣ್ಣ ನನ್ನ ಒಲವಿನ ಬಣ್ಣ ...’ ಹಾಡಿನಲ್ಲಿ ಧಮೇಂದ್ರ ಅವರ ಅಭಿನಯದ ಮಾದರಿಯನ್ನು ವಿಷ್ಣು ಅನುಕರಿಸಿದ್ದಾಗ, ಸ್ವತಃ ಧಮೇಂದ್ರ ವಿಷ್ಣು ಅವರನ್ನು ಮನಸಾರೆ ಮೆಚ್ಚಿದ್ದರು. ಕೆಲವು ಚಿತ್ರಗಳಲ್ಲಿ ವಿಷ್ಣು, ರಾಜೇಶ್ ಖನ್ನಾ ಅವರನ್ನು ಅನುಕರಿಸಿದ್ದೂ ಇದೆ. ಆದರೆ, ಅವರಿಗೆ ಶಮ್ಮಿ ಕಪೂರ್ ಬಹಳ ಇಷ್ಟವಾದ ನಟ. ಶಮ್ಮಿಯವರನ್ನು ಒಮ್ಮೆ ವಿಷ್ಣು ಭೇಟಿಯಾದಾಗ, ಅವರ ಕಾಲಿಗೆ ನಮಿಸಿದ್ದರು.
ಸ್ನೇಹಜೀವಿಯಾಗಿದ್ದ ವಿಷ್ಣುವರ್ಧನ್, ಎಲ್ಲರೊಂದಿಗೂ ಸ್ನೇಹದಿಂದ ಬೆರೆಯುತ್ತಿದ್ದುದಷ್ಟೇ ಅಲ್ಲ, ತುಂಬು ಪ್ರೋತ್ಸಾಹ ನೀಡುತ್ತಿದ್ದರು. ‘ತುಂಬಿದ ಮನೆ’ ಚಿತ್ರದ ಅಭಿನಯಕ್ಕೆ ಉಮಾಶ್ರೀಯವರನ್ನು ಫೋನ್ ಮಾಡಿ ಅಭಿನಂದಿಸಿದ್ದ ವಿಷ್ಣುವರ್ಧನ್, ಶಿವರಾಜಕುಮಾರ್ ಅವರ ‘ಆನಂದ್’ ಚಿತ್ರ ನೋಡಿ, ಸಂತಸದಿಂದ ತಮಗೆ ‘ನಾಗರಹಾವು’ ಚಿತ್ರದ ತಮ್ಮ ಅಭಿನಯ ಮೆಚ್ಚಿ ಎಂ.ಜಿ.ಆರ್ ನೀಡಿದ್ದ ಉಂಗುರವನ್ನು ಉಡುಗೊರೆಯಾಗಿ ನೀಡಿ ಔದಾರ್ಯ ಮೆರೆದಿದ್ದರು.
ಮನೆಯಲ್ಲೂ ಜಾತಿಭೇದವಿರದ ಸೌಹಾರ್ದ ಕುಟುಂಬದ ಯಜಮಾನರಾಗಿದ್ದ ವಿಷ್ಣು, ಸ್ನೇಹಲೋಕ ಸ್ಥಾಪಿಸಿದವರು. ಅಶಕ್ತ ಕಲಾವಿದರಿಗೆ, ನಿಸ್ಸಹಾಯಕರಿಗೆ ಎಡಗೈಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗದಂತೆ ದಾನ ಮಾಡಿ ಒಂದು ಚೂರೂ ಪ್ರಚಾರ ಬಯಸದೆ, ನಿರ್ಲಿಪ್ತರಾಗಿದ್ದರು. ಕೊನೆಗೆ ಅಧ್ಯಾತ್ಮದತ್ತ ಹೊರಳಿದ ಅವರು, 2009ರ ಡಿಸೆಂಬರ್ 30ರಂದು ಕೊನೆಯುಸಿರೆಳೆದರು.
ಕನ್ನಡಿಗರ ಹೃದಯಗಳಲ್ಲಿ ವಿಷ್ಣು ಅವರ ಅಭಿನಯದ ಮೆರುಗಿನ ಸ್ಮಾರಕ ಸದಾ ಆಚಂದ್ರಾರ್ಕವಾಗಿದೆ. ‘ವಿಷ್ಣು ಸೇನಾ’ ಚಿತ್ರಕ್ಕಾಗಿ ಉಪೇಂದ್ರ ಅವರು ಬರೆದಂತೆ, ‘ಚಾಮಯ್ಯ ಮೇಷ್ಟ್ರೇ ಬೇಕು ನಾಗರ ಹಾವು ರಾಮಾಚಾರಿಗೆ ... ವಿ ಮಿಸ್ ಆಲ್ ದ ಫನ್, ವಿ ಮಿಸ್ ಆಲ್ ದ ಜಾಯ್, ವಿ ಮಿಸ್ ಯೂ ...’ ಎನ್ನುವಂತೆ ಕನ್ನಡಿಗರು ವಿಷ್ಣುವರ್ಧನ್ ಅವರನ್ನು ಮಿಸ್ ಮಾಡಿಕೊಳ್ಳುತ್ತಲೇ ಇದ್ದಾರೆ.
(ಲೇಖಕರು ಪ್ರಾಧ್ಯಾಪಕರು, ಕೋಲಾರ)