ಒಂದೇ ಜಾಗ, ಎರಡೇ ಪಾತ್ರ, ಹೊಸ ಸಿನಿಮಾ ...

Evidence - Final
Published on

ಬೆಂಗಳೂರು: ಎರಡು ವರ್ಷಗಳ ಹಿಂದೆ 'ಪುಟ ನಂಬರ್​ 109' ಎಂಬ ಚಿತ್ರ ಬಿಡುಗಡೆಯಾಗಿದ್ದು ನೆನಪಿರಬಹುದು. ದಯಾಳ್​ ಪದ್ಮನಾಭನ್​ ನಿರ್ದೇಶನದ ಈ ಚಿತ್ರವು ಸೀಮಿತ ಲೊಕೇಶನ್​ಗಳಲ್ಲಿ, ಕಡಿಮೆ ಪಾತ್ರಗಳ ನಡುವೆ ನಡೆಯುವಂತಹ ಕಥೆ ಇತ್ತು. ಅದರಲ್ಲೂ ಒಬ್ಬ ಪೊಲೀಸ್​ ಅಧಿಕಾರಿ ಮತ್ತು ಬರಹಗಾರ ನಡುವೆ ನಡೆಯುವ ದೃಶ್ಯಗಳೇ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.

ಈಗ ಅದನ್ನು ಮೀರಿಸಿದ ಇನ್ನೊಂದು ಪ್ರಯತ್ನ ಆಗಿದೆ. ಆ ಚಿತ್ರದಲ್ಲಾದರೂ ಬೆರಳಣಿಕಯಷ್ಟು ಪಾತ್ರಗಳು ಮತ್ತು ಕೆಲವು ಲೊಕೇಶನ್​ಗಳಿದ್ದವು. ಆದರೆ, 'ಎವಿಡೆನ್ಸ್​' ಎಂಬ ಹೊಸ ಚಿತ್ರವು ಒಂದೇ ಲೊಕೇಶನ್​ನಲ್ಲಿ ಎರಡೇ ಪಾತ್ರಗಳ ಮೂಲಕ ಕಥೆ ಅನಾವರಣಗೊಳ್ಳಲಿರುವುದು ವಿಶೇಷ.

ಧೃತಿ ಪ್ರೊಡಕ್ಷನ್ಸ್‌ ಅಡಿಯಲ್ಲಿ ಪ್ರವೀಣ್ ಮತ್ತು ಅವರ ಸ್ನೇಹಿತರು ಸೇರಿ ನಿರ್ಮಿಸುತ್ತಿರುವ ಹೊಸ ಚಿತ್ರ 'ಎವಿಡೆನ್ಸ್'. ಒಂದೇ ಲೊಕೇಶನ್​ನಲ್ಲಿ ಎರಡೇ ಪಾತ್ರಗಳ ಮೂಲಕ ಕಥೆ ಅನಾವರಣಗೊಳ್ಳಲಿದೆ. ರೋಬೋ ಗಣೇಶ್ ಮತ್ತು ಮಾನಸ ಜೋಷಿ ಆ ಎರಡು ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

ಒಂದೇ ಜಾಗ ಮತ್ತು ಎರಡು ಪಾತ್ರಗಳನ್ನು ಬಳಸಿಕೊಂಡು ಇಡೀ ಸಿನಿಮಾವನ್ನು ಕಟ್ಟಿ ನಿಲ್ಲಿಸುವುದು ನಿಜಕ್ಕೂ ಸವಾಲಿನ ಕೆಲಸ. ಸಸ್ಪೆನ್ಸ್ , ಥ್ರಿಲ್ಲರ್ ಜಾನರಿನ ಈ ಚಿತ್ರದಲ್ಲಿ ಈವರೆಗೆ ಎಲ್ಲೂ ಅನಾವರಣಗೊಳ್ಳದ ಕಥಾವಸ್ತು ಇರಲಿದೆ‌ಯಂತೆ.

ಅಂದಹಾಗೆ, ಈ‌ ಚಿತ್ರಕ್ಕೆ ಪ್ರವೀಣ್ ರಾಮಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ‌‌. ರವಿ ಸುವರ್ಣ ಛಾಯಾಗ್ರಹಣ, ಕಾರ್ತಿಕ್ ವೆಂಕಟೇಶ್ ಸಂಗೀತ ಈ ಚಿತ್ರಕ್ಕಿದೆ. ಕನಕಪುರ ಮುಖ್ಯರಸ್ತೆಯಲ್ಲಿರುವ ಭೂಮಿಕಾ ಸ್ಟುಡಿಯೋನಲ್ಲಿ 'ಎವಿಡೆನ್ಸ್' ಚಿತ್ರ ಸಂಪೂರ್ಣ ಚಿತ್ರೀಕರಣಗೊಂಡಿದೆ. ಈಗಾಗಲೇ ಈ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರದ ಟೀಸರ್​ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net