

ಬೆಂಗಳೂರು: ತಮ್ಮ ವಿಶಿಷ್ಟ್ಯ ಧ್ವನಿ ಮತ್ತು ನಟನೆಯಿಂದ ಎಲ್ಲರ ಗಮನಸೆಳೆದಿದ್ದ ರಾಕ್ಲೈನ್ ಸುಧಾಕರ್ ಇಂದು ಬೆಳಿಗ್ಗೆ 'ಶುಗರ್ಲೆಸ್' ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿ ನಿಧನರಾಗಿದ್ದಾರೆ. ಸುಧಾಕರ್ ಸಾವಿಗೆ ಧನಂಜಯ್, ಪವನ್ ಒಡೆಯರ್, ಪುಷ್ಕರ್ ಮಲ್ಲಿಕಾರ್ಜುನಯ್ಯ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.
ಅಂದಹಾಗೆ, ಸುಧಾಕರ್ ಅವರು ನಟರಾಗಿದ್ದೇ ಒಂದು ಆಕಸ್ಮಿಕ. ಹಾಗೆಯೇ ಅವರ ಹೆಸರಿನ ಹಿಂದೆ ರಾಕ್ಲೈನ್ ಎಂಬ ಹೆಸರಿರುವುದನ್ನು ನೋಡಿ ಅವರು ರಾಕ್ಲೈನ್ ವೆಂಕಟೇಶ್ ಅವರ ಸಂಬಂಧಿ ಇರಬಹುದು ಎಂದು ಭಾವಿಸಿದ ಹಲವರಿದ್ದಾರೆ.
ವೆಂಕಟೇಶ್ ಮತ್ತು ಸುಧಾಕರ್ ಅವರಿಗೂ ಯಾವುದೇ ರಕ್ತ ಸಂಬಂಧ ಇಲ್ಲ. ಆದರೆ, ಸುಧಾಕರ್ ಅವರು ರಾಕ್ಲೈನ್ ವೆಂಕಟೇಶ್ ಅವರ ರಾಕ್ಲೈನ್ ಪ್ರೊಡಕ್ಷನ್ಸ್ನಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದರಿಂದ ಅವರಿಗೆ ರಾಕ್ಲೈನ್ ಸುಧಾಕರ್ ಎಂಬ ಹೆಸರು ಬಂದಿದೆ. ಸುಧಾಕರ್ ಅವರು ರಾಕ್ಲೈನ್ ಪ್ರೊಡಕ್ಷನ್ಸ್ನಲ್ಲಿ ನಿರ್ಮಾಣವಾದ ಹಲವು ಚಿತ್ರಗಳಿಗೆ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದರು. ಅದೇ ಕಾರಣಕ್ಕೆ ಅವರಿಗೆ ಎಲ್ಲರೂ ರಾಕ್ಲೈನ್ ಸುಧಾಕರ್ ಎಂದು ಕರೆಯುತ್ತಿದ್ದರು.
ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಸುಧಾಕರ್, 'ಡಕೋಟ ಎಕ್ಸ್ಪ್ರೆಸ್' ಚಿತ್ರದಲ್ಲೊಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಅವರಲ್ಲೊಬ್ಬ ನಟನನ್ನು ಗುರುತಿಸಿದ ಯೋಗರಾಜ್ ಭಟ್, ತಮ್ಮ 'ಪಂಚರಂಗಿ' ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಕೊಟ್ಟರು. ಈ ಪಾತ್ರವನ್ನು ಅದ್ಭುತವಾಗಿ ಬಳಿಸಿಕೊಂಡ ಸುಧಾಕರ್, ಎಲ್ಲರ ಮನಗೆದ್ದರು.
ಆ ನಂತರ ಅವರು ಹಿಂದುರಿಗಿ ನೋಡುವ ಪ್ರಮೇಯವೇ ಬರಲಿಲ್ಲ. 'ಲವ್ ಇನ್ ಮಂಡ್ಯ', 'ಜೂಮ್', 'ಕೆಮಿಸ್ಟ್ರಿ ಆಫ್ ಕರಿಯಪ್ಪ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ', 'ಅಧ್ಯಕ್ಷ' ಸೇರಿದಂತೆ ಬಹಳ ಕಡಿಮೆ ಸಮಯದಲ್ಲಿ ಸುಧಾಕರ್ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಕನ್ನಡ ಚಿತ್ರರಂಗದಲ್ಲಿ ನಟನಾಗಿ ಜನಪ್ರಿಯರಾದ ಮೇಲೆ ಕ್ರಮೇಣ, ರಾಕ್ಲೈನ್ ಸಂಸ್ಥೆಯಿಂದ ಹೊರಬಂದ ಅವರು, ನಂತರದ ವರ್ಷಗಳಲ್ಲಿ ನಟರಾಗಿಯೇ ಗುರುತಿಸಿಕೊಂಡರು.
ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದ ಜನಪ್ರಿಯ ಪೋಷಕ ನಟ ರಾಕ್ಲೈನ್ ಸುಧಾಕರ್ ಅವರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 10 ಗಂಟೆ ಹರಿಶ್ಚಂದ್ರ ಘಾಟ್ನಲ್ಲಿ ನಡೆಯಲಿದೆ.