ಸಿನಿಮಾದಲ್ಲಿ ಸಿನಿಮಾ ತೋರಿಸುವ 'ಓಮಿನಿ' ಚಿತ್ರದ ಟ್ರೇಲರ್ ಬಿಡುಗಡೆ

omni NEW
Published on

ಬೆಂಗಳೂರು: ಓಮಿನಿ ಎಂದರೆ ತಕ್ಷಣ ನೆನಪಾಗುವುದು ಕಾರ್​. ಆದರೆ, ಈ ಓಮಿನಿಗೆ ಲ್ಯಾಟಿನ್​ ಭಾಷೆಯಲ್ಲಿ ಎಲ್ಲಾ ಎಂಬ ಅರ್ಥವಿದೆ. ಈಗ್ಯಾಕೆ ಈ ವಿಷಯವೆಂದರೆ, ಕನ್ನಡ ಚಿತ್ರರಂಗದಲ್ಲಿ 'ಓಮಿನಿ' ಎಂಬ ಚಿತ್ರವೊಂದು ಸದ್ದಿಲ್ಲದೆ ತಯಾರಾಗಿದ್ದು, ಇತ್ತೀಚೆಗೆ ಟ್ರೇಲರ್ ಸಹ ಬಿಡುಗಡೆಯಾಗಿದೆ. ಇತ್ತೀಚೆಗೆ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡದವರಿಗೆ ಶುಭ ಕೋರಿದ್ದಾರೆ.

ಟ್ರೇಲರ್​ ಬಿಡುಗಡೆ ಮಾಡಿ ಮಾತನಾಡಿದ ಅರಗ ಜ್ಞಾನೇಂದ್ರ, 'ತೀರ್ಥಹಳ್ಳಿ ಸುಂದರವಾದ ಊರು. ಅಲ್ಲಿನ ಗಾಳಿ, ನೀರಿಗೆ ಏನೋ ಅದ್ಭುತ ಶಕ್ತಿ ಇದೆ ಅನಿಸುತ್ತದೆ. ರಾಷ್ಟ್ರಕವಿ ಕುವೆಂಪು, ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರು ಸೇರಿದಂತೆ ಅನೇಕ ಗಣ್ಯರು ನಮ್ಮ ತಾಲ್ಲೂಕಿನವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಈ 'ಓಮಿನಿ' ಚಿತ್ರದ ನಿರ್ದೇಶಕ ಮಂಜು ಕೂಡ ನಮ್ಮೂರಿನವರು. ಇವರೆಲ್ಲಾ ಬಂದು ನನ್ನನ್ನು ಸಮಾರಂಭಕ್ಕೆ ಆಹ್ವಾನಿಸಿದಾಗ ಬರಲ್ಲ ಎಂದು ಹೇಳಲು ಆಗಲಿಲ್ಲ. ಅವರೆಲ್ಲರ ಪ್ರೀತಿ ನನ್ನ ಇಲ್ಲಿಯವರೆಗೂ ಕರೆತಂದಿದೆ. ಚಿತ್ರಕ್ಕೆ ಒಳ್ಳೆಯದಾಗಲಿ' ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹಾರೈಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಸಹ ಈ ಸಮಾರಂಭದಲ್ಲಿ ಹಾಜರಿದ್ದರು.

ನಂತರ ಮಾತನಾಡಿದ ನಿರ್ದೇಶಕ ಮಂಜು ಹೆದ್ದೂರ್​, 'ಚಿತ್ರದಲ್ಲಿ ಓಮಿನಿ ಕಾರ್ ಸಹ ಪ್ರಮುಖ ಪಾತ್ರವಹಿಸಿದೆ. ಟ್ರೇಲರ್ ಬಿಡುಗಡೆಯಾಗಿದ್ದು, ಆಗಸ್ಟ್ 19 ರಂದು ಚಿತ್ರ ತೆರೆಗೆ ಬರಲಿದೆ‌. ನಾನು ನಿರ್ದೇಶನದೊಂದಿಗೆ ಹಲವು ಜವಾಬ್ದಾರಿ ಹೊತ್ತುಕೊಂಡಿದ್ದೀನಿ. ಪ್ರಮುಖಪಾತ್ರದಲ್ಲೂ ಕಾಣಿಸಿಕೊಂಡಿದ್ದೀನಿ' ಎನ್ನುತ್ತಾರೆ.

ಇದೊಂದು ವಿಭಿನ್ನ ಕಥೆಯ ಚಿತ್ರ ಎನ್ನುವ ನಾಯಕ ಸಿದ್ದು ಮೂಲಿಮನಿ, 'ಸಿನಿಮಾದಲ್ಲಿ ಸಿನಿಮಾ ತೋರಿಸುವ ಪ್ರಯತ್ನ ಮಾಡಿದ್ದೇವೆ. ಲವ್, ಸಸ್ಪೆನ್ಸ್, ಹಾರಾರ್ ಎಲ್ಲಾ‌ ಅಂಶಗಳು ನಮ್ಮ ಚಿತ್ರದಲ್ಲಿದೆ.‌ ನಮ್ಮ ಚಿತ್ರದಲ್ಲಿ ಓಮಿನಿ ಪ್ರಮುಖ ಪಾತ್ರ ವಹಿಸುತ್ತದೆ. ತೀರ್ಥಹಳ್ಳಿಯ ಸುಂದರ ಪರಿಸರದಲ್ಲೇ ಹೆಚ್ಚು ಚಿತ್ರೀಕರಣ ನಡೆದಿದೆ‌. ಇದು ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರ. ನೋಡಿ' ಎಂದು ಹೇಳುತ್ತಾರೆ.

ಈ ಚಿತ್ರದಲ್ಲಿ ಸಿದ್ದುಗೆ ನಾಯಕಿಯಾಗಿ ಅಶ್ವಿನಿ ಅಭಿನಯಿಸಿದ್ದು, ಪೂಜಾ ಜನಾರ್ದನ, ಭರತ್‌ ಬೋಪ್ಪಣ್ಣ, ಮಂಜು ಹೆದ್ದೂರ್, ಆಕಾಂಕ್ಷ ಪಟಮಕ್ಕಿ, ಮೋಹನ್ ಜುನೇಜ, ಪ್ರಕಾಶ್ ತುಮ್ಮಿನಾಡು, ಮನಸ್ವಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಶ್ರೀ ಬೆಳ್ಳುಡಿ ಫಿಲಂಸ್ ಹಾಗೂ ಎಸ್ ಆರ್ ಗ್ರೂಪ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಅರ್ಜುನ್ ರಾಮು ಸಂಗೀತ ಹಾಗೂ ಎಂ.ಬಿ.ಅಳ್ಳಿಕಟ್ಟಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net