1 ಪೈಸೆ ಖರ್ಚು ಮಾಡದೇ ಅದ್ಧೂರಿ ಮದ್ವೆಯಾದ ನಯನತಾರಾ-ವಿಘ್ನೇಶ್​ಗೆ ತಿಂಗಳ ಬಳಿಕ ಬಿಗ್​ ಶಾಕ್​! ​

Nayana
Published on

ಚೆನ್ನೈ: ತಾರಾ ದಂಪತಿ ನಯನತಾರಾ ಮತ್ತು ವಿಘ್ನೇಶ್​ ಶಿವನ್​ ವಿರುದ್ಧ ನೆಟ್​ಫ್ಲಿಕ್ಸ್​ ಕಂಪನಿ ನೋಟಿಸ್​ ಕಳುಹಿಸಿದೆ. ನಯನಾ ಮತ್ತು ವಿಘ್ನೇಶ್​ ಜೂನ್​ 9ರಂದು ಸಪ್ತಪದಿ ತುಳಿದರು. ಜುಲೈ 9ಕ್ಕೆ ಮೊದಲ ತಿಂಗಳು ಪೂರೈಸಿದ್ದಕ್ಕೆ ದಂಪತಿ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಮದುವೆ ಬಂದಿದ್ದ ಸೆಲೆಬ್ರಿಟಿಗಳ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು. ಇದರಿಂದ ಅಸಮಾಧಾನಗೊಂಡಿರುವ ನೆಟ್​ಫ್ಲಿಕ್ಸ್​ ಮದುವೆ ವಿವಾಹ ವಿಡಿಯೋ ಬಿಡುಗಡೆ ಒಪ್ಪಂದದಿಂದ ಈಗಾಗಲೇ ಹಿಂದೆ ಸರಿದಿದೆ.

ಈ ಪ್ರಕರಣದಲ್ಲಿ ನಡೆದಿರುವ ತಾಜಾ ಬೆಳವಣಿಗೆ ಏನೆಂದರೆ, ತಾರಾ ದಂಪತಿಗೆ ಲೀಗಲ್​ ನೋಟಿಸ್​ ಕಳುಹಿಸಿರುವ ನೆಟ್​ಫ್ಲಿಕ್ಸ್​. ವಿಡಿಯೋ ಪ್ರಸಾರದ ಹಕ್ಕು ಸೇರಿದಂತೆ ಮದುವೆಗೆ ಖರ್ಚು ಮಾಡಲಾದ 25 ಕೋಟಿ ರೂಪಾಯಿ ಹಣವನ್ನು ವಾಪಸ್​ ಕೊಡುವಂತೆ ಕೇಳಿದೆ. ಜೂನ್​ 9ರಂದು ಮಹಾಬಲಿಪುರಂನ ರೆಸಾರ್ಟ್​ ಒಂದರಲ್ಲಿ ಶಾಸ್ತ್ರೋಕ್ತವಾಗಿ ನಡೆದ ಕಾರ್ಯಕ್ರಮದಲ್ಲಿ ನಯನಾ ಮತ್ತು ವಿಘ್ನೇಶ್​ ಹಸಮಣೆ ಏರಿದರು.

ಇಡೀ ಮದುವೆಗೆ ನೆಟ್​ಫ್ಲಿಕ್ಸ್​ ಹಣ ಖರ್ಚು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಮದುವೆಗೆ ಬಂದ ಅತಿಥಿಗಳಿಗೆ ಕೊಠಡಿಗಳು, ಕಾರ್ಯಕ್ರಮದ ಅಲಂಕಾರ, ವಧು-ವರರ ಮೇಕಪ್​, ಭದ್ರತೆ ಸೇರಿದಂತೆ ಬಹುತೇಕ ವ್ಯವಸ್ಥೆಯನ್ನು ನೆಟ್​​ಫ್ಲಿಕ್ಸ್​ ಮಾಡಿತ್ತು. ಗಮನಾರ್ಹ ಸಂಗತಿಯೆಂದರೆ, ಪ್ರತಿ ಊಟಕ್ಕೆ 3500 ಸಾವಿರ ರೂಪಾಯಿಯಂತೆ ಮದುವೆ ಬಂದ ಅತಿಥಿಗಳಿಗೆಲ್ಲ ನೆಟ್​ಫ್ಲಿಕ್ಸ್​ ಊಟದ ವ್ಯವಸ್ಥೆಯನ್ನೂ ಮಾಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಈ ಮದುವೆಗೆ ನಟ ಸೂರ್ಯ, ರಜಿನಿಕಾಂತ್​ ಹಾಗೂ ಶಾರೂಖ್​ ಖಾನ್​ ಸೇರಿದಂತೆ ಘಟಾನುಘಟಿ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಜುಲೈ 9ಕ್ಕೆ ಒಂದು ಮದುವೆಯಾಗಿ ಒಂದು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಇಬ್ಬರು ಪ್ರಮುಖ ಸೆಲೆಬ್ರಿಟಿಗಳ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಮದುವೆಯಾಗಿ ಒಂದು ತಿಂಗಳು ಕಳೆದರೂ ನೆಟ್​ಫ್ಲಿಕ್ಸ್​ ವಿಡಿಯೋ ಪ್ರಸಾರ ಮಾಡದಿದ್ದಕ್ಕೆ ತಾರಾ ದಂಪತಿ ಫೋಟೋಗಳನ್ನು ಹಂಚಿಕೊಂಡಿದ್ದಾರೆಂದು ಹೇಳಲಾಗಿದೆ. ಏಕೆಂದರೆ, ದಿನಗಳು ಕಳೆದಂತೆ ಜನರಿಗೆ ನಮ್ಮ ಮದುವೆ ಬಗ್ಗೆ ಆಸಕ್ತಿ ಕಳೆದು ಹೋಗಬಹುದು ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಒಪ್ಪಂದದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ನೆಟ್​ಫ್ಲಿಕ್ಸ್​ ಆರೋಪಿದ್ದು, ಹಣ ವಾಪಾಸಾತಿಗೆ ನೋಟಿಸ್​ ಹೊರಡಿಸಿದೆ ಎಂದು ಹೇಳಲಾಗಿದೆ.

ಅಂದಹಾಗೆ ಕಾಲಿವುಡ್​ನ ಸ್ಟೈಲಿಶ್ ನಿರ್ದೇಶಕ ಗೌತಮ್ ಮೆನನ್ ಅವರು ವಿಘ್ನೇಶ್ ಮತ್ತು ನಯನಾ ಮದುವೆಯ ಸಂಚಿಕೆಯನ್ನು ನಿರ್ದೇಶಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net