More

    ತಪಾಸಣೆ ವೇಳೆ​ ವಾಹನ ಹರಿಸಿ ಮಹಿಳಾ SI ಭೀಕರ ಹತ್ಯೆ: ಡಿಸಿಪಿ ಕೊಲೆ ಬೆನ್ನಲ್ಲೇ ಮತ್ತೊಂದು ದುರಂತ

    ರಾಂಚಿ: ಗಣಿಗಾರಿಕೆ ಮಾಫಿಯಾಗೆ ಪೊಲೀಸ್​ ಅಧಿಕಾರಿಯೊಬ್ಬರು ಬಲಿಯಾಗಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಪಾಸಣೆಯ ವೇಳೆ ಪಿಕಪ್​ ವಾಹನ ಹರಿಸಿ, ಮಹಿಳಾ ಸಬ್​​ ಇನ್ಸ್​ಪೆಕ್ಟರ್​ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್​ ರಾಜಧಾನಿ ರಾಂಚಿಯಲ್ಲಿ ಜುಲೈ 20ರಂದು ನಡೆದಿದೆ.

    ಬುಧವಾರ ಬೆಳಗ್ಗೆ ನಸುಕಿನ ಜಾವದಲ್ಲಿ ತುಪುದನಾ ಏರಿಯಾದಲ್ಲಿ ಈ ಭೀಕರ ಘಟನೆ ನಡೆದಿದ್ದು, ಮೃತ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಸಂಧ್ಯಾ ತೊಪ್ನೋ ಎಂದು ಗುರುತಿಸಲಾಗಿದೆ. ಡಿಸಿಪಿ ಶ್ರೇಣಿಯ ಹರಿಯಾಣ ಪೊಲೀಸ್​ ಅಧಿಕಾರಿ ಸುರೇಂದ್ರ ಸಿಂಗ್​ ಅವರು ನುಹ್​ ಏರಿಯಾದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಮಾಫಿಯಾವನ್ನು ತಡೆಯಲು ಹೋದಾಗ ಅವರ ಮೇಲೆ ಟ್ರಕ್​ ಹರಿಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಈ ಘಟನೆ ನಡೆದ ಒಂದು ದಿನದ ಬೆನ್ನಲ್ಲೇ ರಾಂಚಿಯಲ್ಲಿ ಅದೇ ರೀತಿಯ ಘಟನೆ ನಡೆದಿದೆ.

    ಸಂಧ್ಯಾ ಅವರ ಮೇಲೆ ಪಿಕಪ್​ ವಾಹನ ಹರಿಸಿ, ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿ ನೆರವಿನಿಂದ ಪೊಲೀಸರು ಬಂಧಿಸಿದ್ದು, ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಂಧ್ಯಾ ಅವರು ತುಪುದುನಾ ಹೊರ ವಲಯದ ಉಸ್ತುವಾರಿ ವಹಿಸಿದ್ದರು ಎಂದು ರಾಂಚಿಯ ಎಸ್​ಎಸ್​ಪಿ ತಿಳಿಸಿದ್ದಾರೆ.

    ಸಂಧ್ಯಾ ಅವರ ಸಾವಿಗೆ ಜಾರ್ಖಂಡ್​ ಪೊಲೀಸ್​ ಇಲಾಖೆ ಕಂಬನಿ ಮಿಡಿದಿದೆ. ಸಂಧ್ಯಾ ಕುಟುಂಬದಲ್ಲೂ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದೆ.

    ಹರಿಯಾಣದ ಸುರೇಂದ್ರ ಸಿಂಗ್ ಅವರು​ ತಮ್ಮ ತಂಡದೊಂದಿಗೆ ನಿನ್ನೆ (ಜುಲೈ 19) ಬೆಳಗ್ಗೆ 11.30ಕ್ಕೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ನುಹ್​ ಏರಿಯಾಗೆ ತಲುಪಿದ್ದರು. ಪೊಲೀಸ್​ ಸಿಬ್ಬಂದಿಯನ್ನು ಕಂಡ ಕೂಡಲೇ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಇದೇ ವೇಳೆ ದಾರಿಯಲ್ಲಿ ನಿಂತ ಅಧಿಕಾರಿ ಸುರೇಂದ್ರ ಸಿಂಗ್​ ಕಲ್ಲು ತುಂಬಿದ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ ಟ್ರಕ್​ ಚಾಲಕ ಸುರೇಂದ್ರ ಸಿಂಗ್​ ಅವರ ಮೇಲೆ ಟ್ರಕ್​ ಹರಿಸಿದ್ದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ರಸ್ತೆಯಿಂದ ಪಕ್ಕಕ್ಕೆ ಜಿಗಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ. ಘಟನೆ ಬಳಿಕ ಆರೊಪಿಗಳು ಪರಾರಿಯಾಗಿದ್ದಾರೆ.

    ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್ ಆರೋಪಿಗಳನ್ನು ಪತ್ತೆ ಹಚ್ಚಲು ಆದೇಶಿಸಿದ್ದು, ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಪೊಲೀಸ್ ಅಧಿಕಾರಿ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಗಣಿಗಾರಿಕೆ ಮಾಫಿಯಾಗೆ ಪೊಲೀಸ್​ ಅಧಿಕಾರಿ ಬಲಿ: ಟ್ರಕ್​ ಹರಿಸಿ ಡಿಸಿಪಿಯ ಭೀಕರ ಹತ್ಯೆ

    ಪರೀಕ್ಷೆ ಬರೆಯಲು ಒಳಉಡುಪು ಬಿಚ್ಚಿಸಿದ ಪ್ರಕರಣ: ಇಡೀ ಘಟನೆಯನ್ನು ಮಾಧ್ಯಮ ಮುಂದೆ ಬಿಚ್ಚಿಟ್ಟ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts