

ಬೆಂಗಳೂರು: ಚಿತ್ರಮಂದಿರಗಳಿಗಿಂತ ನೇರವಾಗಿ ಓಟಿಟಿಟಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವರ್ಷ ಧನಂಜಯ್ ಅಭಿನಯದ 'ರತ್ನನ್ ಪ್ರಪಂಚ' ಬಿಡುಗಡೆಯಾಗಿತ್ತು. ಇತ್ತೀಚೆಗೆ ಸತೀಶ್ ನೀನಾಸಂ ಅಭಿನಯದ 'ಡಿಯರ್ ವಿಕ್ರಂ' ಬಿಡುಗಡೆಯಾಗಿತ್ತು. ಈಗ ರಿಷಿ ಅಭಿನಯದ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಸಿನಿಮಾ ಜೀ5ನಲ್ಲಿ ಜುಲೈ 22ಕ್ಕೆ ಬಿಡುಗಡೆಯಾಗುತ್ತಿದೆ.
'ಆಪರೇಷನ್ ಅಲಮೇಲಮ್ಮ', 'ಕವಲು ದಾರಿ' ಮುಂತಾದ ಸಿನಿಮಾಗಳ ಖ್ಯಾತಿಯ ರಿಷಿ, ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಎಂಬ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. ಇತ್ತೀಚೆಗೆ 'ಕ್ರೇಜಿ ಸ್ಟಾರ್' ರವಿಚಂದ್ರನ್ ಅವರು ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಡಿಪ್ರೆಷನ್ ಮತ್ತು ಆತ್ಮಹತ್ಯೆ ಕುರಿತ ಕಥೆ ಇರುವ ಈ ಚಿತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಡಿಪ್ರೆಷನ್, ಆತ್ಮಹತ್ಯೆ ಕಡೆ ವಾಲುತ್ತಿರುವ ಬಗ್ಗೆ ಹೇಳಲಾಗಿದೆ. ಈ ಎರಡು ಗಂಭೀರ ವಿಚಾರಗಳನ್ನಿಟ್ಟುಕೊಂಡು ಹಾಸ್ಯದೊಂದಿಗೆ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಕಥೆ ಸೀರಿಯಸ್ ಆಗಿ ಸಾಗುತ್ತಿದ್ದರೂ, ನೋಡುಗರಿಗೆ ನಾಯಕನ ಕಷ್ಟ ಕಂಡಾಗ ನಗು ತರಿಸುತ್ತದೆ ಎನ್ನುತ್ತಾರೆ ರಿಷಿ. ಒಟ್ಟಾರೆ, ಯುವಜನತೆಯ ಸಮಸ್ಯೆಗಳ ಕುರಿತು ಈ ಸಿನಿಮಾ ಬೆಳಕು ಚೆಲ್ಲಲಿದೆಯಂತೆ.
‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಚಿತ್ರದಲ್ಲಿ ರಿಷಿಗೆ ನಾಯಕಿಯಾಗಿ ಧನ್ಯ ಬಾಲಕೃಷ್ಣ ನಟಿಸಿದ್ದು, ಮಿಕ್ಕಂತೆ ಗ್ರೀಷ್ಮಾ ಶ್ರೀಧರ್, ಅಪೂರ್ವ ಭಾರಧ್ವಜ್, ಭವಾನಿ ಪ್ರಕಾಶ್, ನಾಗಭೂಷಣ, ಮಹದೇವ್ ಪ್ರಸಾದ್ ಮುಂತಾದವರು ನಟಿಸಿದ್ದಾರೆ. ಇಸ್ಲಾಹುದ್ದೀನ್ ಎನ್.ಎಸ್ ಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರವನ್ನು 'ಆಪರೇಷನ್ ಅಲಮೇಲಮ್ಮ' ನಿರ್ಮಿಸಿದ್ದ ಅಮ್ರೇಜ್ ಸೂರ್ಯವಂಶಿ ನಿರ್ಮಾಣ ಮಾಡಿದ್ದಾರೆ.