Pinki Elli? Review: ಪಿಂಕಿ ಹುಡುಕಾಟದ ಪಯಣದಲ್ಲಿ ಕಾಡುವ ತೀವ್ರ ಭಾವಗಳು

pinki elli
Published on

| ಪ್ರಮೋದ ಮೋಹನ ಹೆಗಡೆ

ಚಿತ್ರ: ಪಿಂಕಿ ಎಲ್ಲಿ?
ನಿರ್ದೇಶನ: ಪೃಥ್ವಿ ಕೊಣನೂರು
ನಿರ್ಮಾಪಕ: ಕೃಷ್ಣೇಗೌಡ
ತಾರಾಗಣ: ದೀಪಕ್‌ ಸುಬ್ರಹ್ಮಣ್ಯ, ಅಕ್ಷತಾ ಪಾಂಡವಪುರ, ಅನುಪ್‌ ಶೂನ್ಯ ಮತ್ತಿತರು
ರೇಟಿಂಗ್:‌ 3.5/5

ತಾಯಿ, ಮಗು ಎಂಬ ಪುಟ್ಟ ಸಂಸಾರ. ಗಂಡನಿಂದ ದೂರ ಇರುವ ಆ ತಾಯಿಗೆ ಮಗುವಿನ ಮೇಲೆ ಅತೀವ ಪ್ರೀತಿ. ಆದರೆ, ತಾಯಿ ಈ ಕಾಲದವಳು. ಆಕೆಗೆ ಮಗು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ತನ್ನ ಉದ್ಯೋಗ. ತಾಯಿ ಕೆಲಸಕ್ಕೆ ಹೊರಟರೆ ಮಗುವಿನ ಜವಾಬ್ದಾರಿ ಬೇರೆ ಯಾರದ್ದೋ ಆಗಿರುತ್ತದೆ. ಹೀಗೆ ನಡೆಯುವ ಆ ತಾಯಿಯ ಜೀವನದಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ಮಗು ಕಾಣೆಯಾಗುತ್ತದೆ. ಆ ಪುಟ್ಟ ಮಗುವಿನ ಹುಡುಕಾಟದಲ್ಲಿ ಸಾಗುವ, ತೀವ್ರವಾದ ಭಾವಗಳನ್ನು ಒಳಗೊಂಡಿರುವ ಒಂದು ಸರಳವಾದ ಹಾಗೂ ಮನತಟ್ಟುವ ಕಥೆಯೇ ʼಪಿಂಕಿ ಎಲ್ಲಿ?ʼ.

ಪೃಥ್ವಿ ಕೊಣನೂರು ನಿರ್ದೇಶನದ ʼಪಿಂಕಿ ಎಲ್ಲಿ?ʼ ಚಿತ್ರ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹಾಗೂ ಅನೇಕ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಕೂಡ ಪಡೆದಿದೆ. ಇದರ ಕಥೆಯಲ್ಲಿರುವ ಸೂಕ್ಷ್ಮತೆ ಹಾಗೂ ಚಿತ್ರಕಥೆ ನೋಡುಗನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪಿಂಕಿ ಎಂಬ ಪುಟ್ಟ ಮಗುವನ್ನು ಹುಡುಕುವ ತಾಯಿಯ ಜೀವನದಲ್ಲಿನ ಕೆಲವು ಘಟನೆಗಳು ಆಕೆಯ ಮನಸ್ಸನ್ನು ಕಲಕಿರುತ್ತದೆ. ಅದರ ಬೆನ್ನಲ್ಲೇ ಮತ್ತೊಂದು ಆಘಾತ ಆಕೆಯ ಮನೆ ಬಾಗಿಲಿಗೆ ಬಂದಿರುತ್ತದೆ. ಅದರಿಂದ ಆಕೆ, ಬೇಡ ಎಂದು ದೂರಾದ ತನ್ನ ಪತಿಯ ಬಳಿ ಮತ್ತೆ ಹೋಗಬೇಕಾಗುತ್ತದೆ. ನೋವು, ವಿಷಾದ, ಮತ್ತು ಆ ತಾಯಿಯ ಅಂತಃಕರಣದಲ್ಲಿ ಆಗುವ ತಳಮಳಗಳು ಪ್ರೇಕ್ಷಕನ ಮನಸ್ಸಿಗೂ ತಾಕುತ್ತದೆ. ಕಥೆಯ ಎಳೆ ಸರಳವಾಗಿದ್ದರೂ ಚಿತ್ರದ ಕಟ್ಟುವಿಕೆಯಲ್ಲಿ ನಿರ್ದೇಶಕರು ಗೆದ್ದಿದ್ದಾರೆ.

ಎಲ್ಲಿಯೂ ಅತಿಯಾದ ವೈಭವೀಕರಣ, ಅಬ್ಬರಗಳಿಲ್ಲದೆ ಸಾಗುವ ಚಿತ್ರ ಅಪ್ಪಟ ಆಧುನಿಕ ಕುಟುಂಬದ ಒಂದು ಕಥೆ ಎಂದು ಹೇಳಬಹುದು. ಪಾತ್ರಗಳು, ಸನ್ನಿವೇಶಗಳು ಅಪರಿಚಿತವಾದರೂ ನಮ್ಮವೇ ಆಗಿವೆ. ಅಷ್ಟೇ ಆಪ್ತವಾಗುವಂತೆ ನಿರೂಪಿಸಿದ ಚಿತ್ರ. ಸಂಭಾಷಣೆಗಳು ಹಾಗೂ ಅಭಿನಯ ಸರಳ ಮತ್ತು ಸಹಜವಾಗಿ ಮೂಡಿಬಂದಿವೆ. ಮಗು ಇನ್ನೇನು ಪಾಲಕರಿಗೆ ಸಿಗುತ್ತದೆ ಎಂದುಕೊಳ್ಳುವ ಹೊತ್ತಿಗೆ ಹೊಸ ತಿರುವು ಮನಸ್ಸನ್ನು ಇನ್ನಷ್ಟು ಘಾಸಿಗೊಳಿಸುತ್ತದೆ.

ತಾಯಿಯ ಪಾತ್ರದಲ್ಲಿ ಬಣ್ಣ ಹಚ್ಚಿದ ನಟಿ ಅಕ್ಷತಾ ಪಾಂಡವಪುರ ತಮ್ಮ ಸಹಜ ನಟನೆಯಿಂದ ಗಮನ ಸೆಳೆಯುತ್ತಾರೆ. ಮಗುವನ್ನು ಕಳೆದುಕೊಂಡಾಗ ಆಗುವ ನೋವು ಹಾಗೂ ಅಸಹಾಯಕತೆಯ ಭಾವವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಂದೆಯ ಪಾತ್ರದಲ್ಲಿ ದೀಪಕ್‌ ಹಾಗೂ ಗಿರೀಶ್‌ ಪಾತ್ರದಲ್ಲಿ ಅನೂಪ್‌ ಅವರದ್ದು ಕೂಡ ಭರವಸೆಯ ಅಭಿನಯ. ಉಳಿದಂತೆ ಯಾವುದೇ ಹಿನ್ನೆಲೆ ಇರದೇ ಅಭಿನಯಿಸಿದ ಸಣ್ಣಮ್ಮ ಪಾತ್ರದ ಗುಂಜಾಲಮ್ಮ ಅಭಿನನಂದನೆಗೆ ಅರ್ಹರು.

ಸಾಮಾಜಿಕ ಕಳಕಳಿ, ಈಗಿನ ಕಾಲದ ಕುಟುಂಬದ ಸ್ಥಿತಿ, ನಮ್ಮ ಸುತ್ತಲಿನ ವಾತಾವರಣ, ಪ್ರೀತಿ, ಮೋಸ ಎಲ್ಲದರ ಕುರಿತು ಬೆಳಕು ಚೆಲ್ಲುವ ಚಿತ್ರ ʼಪಿಂಕಿ ಎಲ್ಲಿ?ʼ ಉಳಿದಂತೆ 107 ನಿಮಿಷಗಳ ಕಾಲ ಸಾಗುವ ಸಿನಿಮಾದ ಗತಿ ಇನ್ನಷ್ಟು ವೇಗವಾಗಿದ್ದರೆ ಇನ್ನಷ್ಟು ಜನರನ್ನು ಆಕರ್ಷಿಸಬಹುದಿತ್ತು ಎಂದೆನಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net