ಸ್ಯಾಂಡಲ್‌ವುಡ್‌ಗೆ ಸೆಂಚುರಿ ಸಂಭ್ರಮ; 22 ವಾರಗಳಲ್ಲಿ 100 ಚಿತ್ರಗಳು ಬಿಡುಗಡೆ

74822454
Published on

| ಪ್ರಮೋದ ಮೋಹನ ಹೆಗಡೆ

ಒಂದೆಡೆ ಐಪಿಎಲ್ ಅಬ್ಬ, ಮತ್ತೊಂದೆಡೆ ಚುನಾವಣೆ ಬಿಸಿಯ ನಡುವೆ ಕನ್ನಡ ಚಿತ್ರಗಳು ಹೈರಾಣಾಗಿದ್ದವು. ಇದೀಗ ಎರಡೂ ಮುಗಿದಿವೆ. ಅದರ ಬೆನ್ನಲ್ಲೇ ಈ ವಾರ ಭರ್ಜರಿ ೆರ್ ಬಾರಿಸುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ತೆರೆಕಂಡ ಸಿನಿಮಾಗಳ ಸಂಖ್ಯೆ 100ರ ಗಡಿ ದಾಟಿದೆ. ಪ್ರತಿ ವಾರ ಸರಾಸರಿ ಐದು ಎಂಬಂತೆ 22 ವಾರಗಳಲ್ಲಿ 100 ಚಿತ್ರಗಳು ಬಿಡುಗಡೆಯಾಗಿವೆ. ಈ ವಾರ ‘ಯದಾ ಯದಾಹಿ’, ‘ಪಿಂಕಿ ಎಲ್ಲಿ?’, ‘ರಾಧಾ ರಮಣ’ ಹಾಗೂ ‘ಹಿಂಟ್’ ಹೀಗೆ ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ಸಸ್ಪೆನ್ಸ್ ಥ್ರಿಲ್ಲರ್‌ನಲ್ಲಿ ಸಿಂಹಪ್ರಿಯಾ

ಇಂದು ರಿಲೀಸ್ ಆಗುತ್ತಿರುವ ಚಿತ್ರಗಳ ಪೈಕಿ ‘ಯದಾ ಯದಾಹಿ’ ಪ್ರಮುವಾದುದು. ಅಶೋಕ್ ತೇಜ ನಿರ್ದೇಶನದ ಈ ಸಸ್ಪೆನ್ಸ್ ಥ್ರಿಲ್ಲರ್ ಹಲವು ವಿಶೇಷತೆಗಳಿಂದ ಕೂಡಿದೆ. ರಿಯಲ್ ಜೋಡಿಯಾಗಿರುವ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವುದಲ್ಲದೇ ಈ ಚಿತ್ರದ ಹಾಡೊಂದನ್ನು ಒಟ್ಟಿಗೆ ಹಾಡಿದ್ದಾರೆ. ಹಾಗೇ ನಟ ದಿಗಂತ್ ಮೊದಲ ಬಾರಿಗೆ ಈ ಚಿತ್ರದಲ್ಲಿ ಖಾಕಿ ಧರಿಸಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗಿನ ‘ಎವರು’ ಕಾದಂಬರಿಯಾಧಾರಿತ ಚಿತ್ರವಾಗಿದ್ದರೂ, ಕನ್ನಡದ ನೇಟಿವಿಟಿಗೆ ತಕ್ಕಂತೆ ಹಲವು ಬದಲಾವಣೆ ಮಾಡಿಕೊಂಡಿದ್ದಾರೆ. ಸಿಂಹಪ್ರಿಯಾ ಜೋಡಿ, ದಿಗಂತ್ ಜತೆ ಅವಿನಾಶ್, ಮಂಜು ಪಾವಗಡ, ಹರೀಶ್ ರಾಯಪ್ಪ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತವಿದೆ.

ರಾಧಾ, ಪಿಂಕಿಗಾಗಿ ಹುಡುಕಾಟ

ಪೃಥ್ವಿ ಕೊಣನೂರು ನಿರ್ದೇಶನದ ಅಕ್ಷತಾ ಪಾಂಡವಪುರ, ದೀಪಕ್ ಅಭಿನಯದ ಸಿನಿಮಾ ‘ಪಿಂಕಿ ಎಲ್ಲಿ?’ ಚಿತ್ರವೂ ಇಂದೇ ಥಿಯೇಟರ್‌ಗಳತ್ತ ಮುಖ ಮಾಡಿದೆ. ಈ ಚಿತ್ರದಲ್ಲಿ ತಾಯಿ ಮಗಳು ಪಿಂಕಿಯ ಹುಡುಕಾಟದಲ್ಲಿದ್ದರೆ, ‘ರಾಧಾ ರಮಣ’ ಚಿತ್ರದಲ್ಲಿ ನಾಯಕಿ ರಾಧಾ, ಕಣ್ಮರೆಯಾದ ನಾಯಕ ರಮಣನ ಹುಡುಕಾಟದಲ್ಲಿದ್ದಾರೆ. ಈ ಚಿತ್ರಕ್ಕೆ ಶ್ರೀಕಾಂತ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವೇದವ್ಯಾಸ್ ನಿರ್ದೇಶನದ ‘ಹಿಂಟ್’ ಕೂಡ ಇಂದು ರಿಲೀಸ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net