

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ದಿಗಂತ್, ವಿಜಯ್ ಸೂರ್ಯ, ಪ್ರತಾಪ್ ನಾರಾಯಣ್ ಸೇರಿ ಹಲವರು ಮಾಡೆಲಿಂಗ್ನಿಂದ ಚಿತ್ರರಂಗಕ್ಕೆ ಬಂದು ಮಿಂಚಿದ್ದಾರೆ. ಆ ಸಾಲಿಗೆ ಹೊಸ ಸೇರ್ಪಡೆ ವಿಶಾಲ್. ಬಾಲಿವುಡ್ ನಟ ಜಾನ್ ಅಬ್ರಹಾಂ ಅಪ್ಪಟ ಅಭಿಮಾನಿ ವಿಶಾಲ್. ಆನ್ಲೈನ್ನಲ್ಲಿ ಜಾನ್ ಅಬ್ರಹಾಂ ನೋಡಿ ಮಾಡೆಲಿಂಗ್ ಕಲಿತ ವಿಶಾಲ್, ನಟನೆಯನ್ನೂ ಸಿನಿಮಾಗಳನ್ನು ನೋಡಿಯೇ ಕಲಿತರಂತೆ. "ನವರತ್ನ' ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದ ಅವರು, ಇದೀಗ "ಡ್ಯಾಡ್, ದೇವರಾಜ್ ಅಲಿಯಾಸ್ ಡೇವಿಡ್' ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ : 500 ಕೋಟಿ ಕ್ಲಬ್ ಸೇರಿದ ಗದರ್-2; ಪಠಾಣ್ ದಾಖಲೆ ಉಡೀಸ್!
"ನನ್ನದು ಇಂಟೆನ್ಸ್ ಪಾತ್ರ, ಅನ್ಯಾಯವನ್ನು ತಡೆಯದ, ಒನ್ ಮ್ಯಾನ್ ಆರ್ಮಿ ರೀತಿಯ ನೇರ ಮಾತಿನ ಹುಡುಗನಾಗಿ ಕಾಣಿಸಿಕೊಳ್ಳಲಿದ್ದೇನೆ' ಎನ್ನುತ್ತಾರೆ ವಿಶಾಲ್. ಇದೊಂದು ಕಲ್ಟ್ ಕಮರ್ಷಿಯಲ್ ಚಿತ್ರವಾಗಿದ್ದು, ಅರ್ಜುನ್ ಕೃಷ್ಣ ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದಾರೆ. ಅವರೇ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಅರ್ಜುನ್, "ಅಪ್ಪ-ಮಗನ ಸೆಂಟಿಮೆಂಟ್ ಇರುವ ಎಮೋಷನಲ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರ. ನಮ್ಮ ಸುತ್ತಮುತ್ತ ನಡೆಯುವ, ಪೇಪರ್ನಲ್ಲಿ ಓದಿದ, ಟಿವಿಯಲ್ಲಿ ನೋಡಿದ ಟನೆಗಳು ಒಬ್ಬನ ಜೀವನದಲ್ಲಿ ನಡೆದರೆ ಹೇಗಿರುತ್ತದೆ ಎಂಬುದು ಕಥೆ' ಎಂದು ಹೇಳಿಕೊಳ್ಳುತ್ತಾರೆ.
ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಯೂಟ್ಯೂಬ್ನಲ್ಲಿ ವೈರಲ್ ಆಗಿವೆ. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿದೆ. ವಿಶಾಲ್ಗೆ ಇಬ್ಬರು ನಾಯಕಿಯರಿದ್ದು ಮಹಿಕಾ ಮತ್ತು ನೃತ್ಯ ಬೋಪಣ್ಣ ನಟಿಸಿದ್ದಾರೆ. ಮಂಜುನಾಥ್, ಸುಚೇಂದ್ರ ಪ್ರಸಾದ್, ಅರುಣಾ ಬಾಲರಾಜ್ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಅನಿಲ್ ಕುಮಾರ್ ಛಾಯಾಗ್ರಹಣ, ವಾಸುಕಿ ವೈಭವ್ ಸಂಗೀತವಿರಲಿದೆ.