

ಬೆಂಗಳೂರು: ಹಾಟ್ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಕೆಟ್ಟ ಕಾಮೆಂಟ್ ಮಾಡಿ, ಟ್ರೋಲ್ ಮಾಡುವವರಿಗೆ ಮಾಜಿ ಬಿಗ್ಬಾಸ್ ಸ್ಪರ್ಧಿ ಹಾಗೂ ವಿವಾದಗಳಿಂದಲೇ ಸುದ್ದಿಯಾದ ಸ್ವಯಂಘೋಷಿತ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿ ಸೋನು ಶ್ರೀನಿವಾಸ ಗೌಡ ಅವರು ಖಡಕ್ ತಿರುಗೇಟನ್ನು ನೀಡಿದ್ದಾರೆ.
ಸಾಮಾಜಿಕ ಜಾಲತಾಣವನ್ನು ಹೆಚ್ಚು ಬಳಸುವವರಿಗೆ ಸೋನು ಶ್ರೀನಿವಾಸ ಗೌಡರನ್ನು ಪರಿಚಯಿಸುವ ಅಗತ್ಯವಿಲ್ಲ. ಏಕೆಂದರೆ, ಆಕೆಯ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ವಿಡಿಯೋಗಳು ಮತ್ತು ಮೀಮ್ಸ್ ಯಾವಾಗಲೂ ಹರಿದಾಡುತ್ತಲೇ ಇರುತ್ತವೆ. ಪ್ರತಿಭೆಯಿಂದ ಗುರುತಿಸಿಕೊಳ್ಳಲು ಸಾಧ್ಯವಾಗದೇ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿರುವ ಮತ್ತು ಮಾಡುತ್ತಿರುವ ಸೋನು, ವಿವಾದಗಳ ಕಾರಣದಿಂದಲೇ ವಿವಾದಿತ ಬಿಗ್ಬಾಸ್ ಶೋನಲ್ಲೂ ಭಾಗವಹಿಸಿ ಕೆಲವೇ ವಾರಕ್ಕೆ ಹೊರಗಡೆ ಬಂದಿದ್ದು ಅನೇಕರಿಗೆ ತಿಳಿದಿದೆ.
ತಾಜಾ ವಿಚಾರ ಏನೆಂದರೆ ಪ್ರಸ್ತುತ ಸೋನು ಗೌಡ ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್ನಲ್ಲಿ ಬೀಡುಬಿಟ್ಟಿದ್ದಾರೆ. ಪ್ರಕೃತಿಯ ಸೌಂದರ್ಯವನ್ನು ಸವಿತ್ತಿರುವುದರ ಜತೆಗೆ ಬಿಕಿನಿ ಫೋಟೋ ಸೇರಿದಂತೆ ಹಾಟ್ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿದ್ದಾರೆ. ಆದರೆ, ಸೋನು ಗೌಡ ಹಾಟ್ ಅವತಾರ ಕಂಡು ಸಾಕಷ್ಟು ಮಂದಿ ಅಶ್ಲೀಲ ಕಾಮೆಂಟ್ಗಳನ್ನು ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ. ಬಹುತೇಕ ಮಂದಿ ಕೆಟ್ಟ ಕಾಮೆಂಟ್ಗಳನ್ನೇ ಮಾಡಿದ್ದಾರೆ.
ಕೆಟ್ಟ ಕಾಮೆಂಟ್ಗಳನ್ನು ಗಮನಿಸಿರುವ ಸೋನು ಗೌಡ ಇದೀಗ ವಿಡಿಯೋವೊಂದನ್ನು ಹಂಚಿಕೊಂಡು ಅಶ್ಲೀಲ ಕಾಮೆಂಟ್ ಮಾಡುವವರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. "ಡಿಯರ್ ಹೇಟರ್ಸ್ (ಪ್ರೀತಿಯ ದ್ವೇಷಿಗಳೇ) ಕಾಮೆಂಟ್ ಬಾಕ್ಸ್ ನಿಮ್ಮದೆ. ನೆಗಿಟಿವ್ ಅಥವಾ ಪಾಸಿಟಿವ್ ಆಗಿರಲಿ, ಪಾಪ ನಿಮ್ಮ ಸಮಯವನ್ನು ನನ್ನ ಕಾಮೆಂಟ್ ಬಾಕ್ಸ್ಗೆ ಕೊಡ್ತಿರಾ ಅಂದ್ರೆ ನಿಜಕ್ಕೂ ಗ್ರೇಟ್" ಎಂದು ಕೆಟ್ಟ ಕಾಮೆಂಟ್ ಮಾಡುವವರಿಗೆ ತಿರುಗೇಟು ನೀಡಿದ್ದಾರೆ.
ಆದರೆ, ಸೋನು ಗೌಡ ಕಾಮೆಂಟ್ಗೆ ನೆಟ್ಟಿಗರು ಸಹ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಿನಗೆ ಇನ್ನೂ ಬುದ್ಧಿ ಬಂದಿಲ್ಲ ಅಲ್ವಾ? ನಿನಗೆ ಮಾನ ಮರ್ಯಾದೆ ಇಲ್ಲಾ ಅಂತೆಲ್ಲಾ ಕಾಮೆಂಟ್ ಮೂಲಕ ಸೋನು ಗೌಡರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಸೋನು ಗೌಡ ಇದ್ಯಾವುದಕ್ಕೂ ಕ್ಯಾರೆ ಎನ್ನದೆ ತಮ್ಮ ಪ್ರವಾಸಿ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಸಾಕಷ್ಟು ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ವಿವಾದಗಳು ಹಾಗೂ ಬಿಗ್ಬಾಸ್ ಸ್ಪರ್ಧೆಯಿಂದ ಪಡೆದ ಖ್ಯಾತಿಯಿಂದ ಸೋನು ಶ್ರೀನಿವಾಸ್ ಗೌಡ ಅವರಿಗೆ ಸಿನಿಮಾ ಆಫರ್ಗಳು ಬರುತ್ತಿವೆ. ಬರೀ ಸಿನಿಮಾ ಮಾತ್ರವಲ್ಲ, ವೆಬ್ ಸಿರೀಸ್ ಮತ್ತು ಶಾರ್ಟ್ ಸಿನಿಮಾಗಳಲ್ಲೂ ಈಕೆ ಬಣ್ಣ ಹಚ್ಚಿದ್ದಾರಂತೆ. ಟಿಕ್ಟಾಕ್ ಮಾಡಿದಷ್ಟು ಸುಲಭವಲ್ಲ ಈ ಸಿನಿಮಾವೆಂದು ಆಕೆ ಈ ಹಿಂದೆ ಹೇಳಿಕೊಂಡಿದ್ದಾಳೆ. ಕ್ಯಾಡ್ಬರೀಸ್ ಜತೆಗೆ ಅನೇಕ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ. ಎಲ್ಲ ಸಿನಿಮಾಗಳಲ್ಲೂ ಬೋಲ್ಡ್ ಪಾತ್ರವನ್ನೇ ಮಾಡುವಂತೆ ಕೇಳುತ್ತಿದ್ದಾರೆ. ಆದರೆ ಈಗ ಅದರಿಂದಲೇ ಆರಂಭಿಸಿದರೆ ಮುಂದೆ ಬೇರೆ ಪಾತ್ರಗಳಿಗೆ ಅವಕಾಶ ಸಿಗುವುದಿಲ್ಲವೆಂದು ನಾನೇ ಸುಮ್ಮನಾಗಿದ್ದೇನೆ. ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತೇನೆ ಎಂದು ಆಕೆ ಈ ಹಿಂದೆ ಹೇಳಿಕೊಂಡಿದ್ದರು.