ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿಲ್ಲ ರಶ್ಮಿಕಾ ಅಭಿನಯದ ಎರಡನೇ ಬಾಲಿವುಡ್​ ಚಿತ್ರ … ಯಾಕೆ?

Mission Majnu
Published on

ಮುಂಬೈ: ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ಬಾಲಿವುಡ್​ ಚಿತ್ರ 'ಗುಡ್​ಬೈ' ಎರಡು ತಿಂಗಳ ಹಿಂದಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈಗ ಎರಡನೆಯ ಚಿತ್ರ 'ಮಿಷನ್​ ಮಜ್ನು' ಬಿಡುಗಡೆಗೆ ಸಜ್ಜಾಗಿದೆ. ಆದರೆ, ಈ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿಲ್ಲ.

ಹೌದು, ಸಿದ್ಧಾರ್ಥ್​ ಮಲ್ಹೋತ್ರಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಮಿಷನ್​ ಮಜ್ನು' ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿಲ್ಲ. ಬದಲಿಗೆ, ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಡಿಜಿಟಲ್​ ಹಕ್ಕುಗಳನ್ನು ನೆಟ್​ಫ್ಲಿಕ್ಸ್​ನವರು ಖರೀದಿಸಿದ್ದು, ಜ.20ಕ್ಕೆ ಚಿತ್ರವನ್ನು ಸ್ಟ್ರೀಮ್​ ಮಾಡಲಿದೆ. ರಶ್ಮಿಕಾ ಅಭಿನಯದ ಚಿತ್ರವೊಂದು ಬಿಡುಗಡೆಯಾಗುತ್ತಿರುವುದು ಅವರ ಅಭಿಮಾನಿಗಳಲ್ಲಿ ಖುಷಿಯಾಗಿದೆಯಾದರೂ, ಓಟಿಟಿಯಲ್ಲಿ ಸ್ಟ್ರೀಮ್​ ಆಗುತ್ತಿರುವುದು ಬಹಳ ಬೇಸರ ತರಿಸಿದೆ.

ಅದಕ್ಕೆ ಕಾರಣವೂ ಇದೆ. ರಶ್ಮಿಕಾ ಇದುವರೆಗೂ ಹಲವು ಯಶಸ್ಸುಗಳನ್ನು ನೋಡಿದ್ದರೂ, ಬಾಲಿವುಡ್​ನಲ್ಲಿ ಒಂದೇ ಒಂದು ಯಶಸ್ಸು ಕಂಡಿಲ್ಲ. ಬಾಲಿವುಡ್​ಗೆ ರಶ್ಮಿಕಾ ಕಾಲಿಟ್ಟಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಲೇ ಇದ್ದಾರೆ. ಹಾಗೆ ನೋಡಿದರೆ, ರಶ್ಮಿಕಾ ಒಪ್ಪಿದ ಮೊದಲ ಬಾಲಿವುಡ್​ ಚಿತ್ರವೆಂದರೆ ಅದು 'ಮಿಷನ್​ ಮಜ್ನು'. ಈ ಚಿತ್ರದ ಚಿತ್ರೀಕರಣ ಮೊದಲು ಮುಗಿದರೂ, ಕಾರಣಾಂತರಗಳಿಂದ ಚಿತ್ರ ತಡವಾಯ್ತು. ಆ ನಂತರ ಪ್ರಾರಂಭವಾದ 'ಗುಡ್​ಬೈ' ಮೊದಲು ಬಿಡುಗಡೆಯಾಗಿ ಬಾಕ್ಸ್​ಆಫೀಸ್​ನಲ್ಲಿ ಸೋತಿತು. ಈಗ ಎರಡನೆಯ ಚಿತ್ರವಾಗಿ ಬಿಡುಗಡೆಯಾಗುತ್ತಿರುವ 'ಮಿಷನ್​ ಮಜ್ನು' ಓಟಿಟಿಯತ್ತ ಸಾಗಿದೆ. ಹಾಗಾಗಿ, ರಶ್ಮಿಕಾ ಅದೆಷ್ಟೇ ಯಶಸ್ಸು ನೋಡಿದ್ದರೂ, ಬಾಲಿವುಡ್​ನಲ್ಲಿ ಇನ್ನೂ ಖಾತೆ ತೆರೆಯಬೇಕಿದೆ.

ಇದೀಗ ರಶ್ಮಿಕಾ ತಮ್ಮ ಮೂರನೆಯ ಚಿತ್ರವಾದ 'ಅನಿಮಲ್​' ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಸಂದೀಪ್​ ರೆಡ್ಡಿ ವಂಗ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್​ಗೆ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net