ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳ ಎರಡು ವಿಭಾಗಗಳಿಗೆ 'RRR' ನಾಮನಿರ್ದೇಶನ

RRR 1
Published on

ಹೈದರಾಬಾದ್​; ಆಸ್ಕರ್​ ಕಣದಲ್ಲಿ ಸ್ಪರ್ಧಿಸುವುದರ ಜತೆಗೆ ಒಂದೆರೆಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳಬೇಕೆಂದು ರಾಜಮೌಳಿ ನಿರ್ದೇಶನದ 'ಆರ್​.ಆರ್.ಆರ್​' ಚಿತ್ರತಂಡ ಸಾಕಷ್ಟು ಪ್ರಯತ್ನ ನಡೆಸಿದೆ. ಈ ಮಧ್ಯೆ, ಗೋಲ್ಡನ್​ ಗ್ಲೋಬ್​ ಪ್ರಶಸ್ತಿಗಳ ಎರಡು ವಿಭಾಗಗಳಿಗೆ ಚಿತ್ರವು ನಾಮಿನೇಟ್​ ಆಗಿದ್ದು. ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿ ಚಿತ್ರತಂಡವಿದೆ.

'ಆರ್​.ಆರ್.ಆರ್​' ಚಿತ್ರವು ಈ ಬಾರಿಯ ಗೋಲ್ಡನ್​ ಗ್ಲೋಬ್​ ಕಣದಲ್ಲಿ ಅತ್ಯುತ್ತಮ ಚಿತ್ರ (ನಾನ್​ ಇಂಗ್ಲೀಷ್ ಚಿತ್ರ) ಮತ್ತು ಅತ್ಯುತ್ತಮ ಹಾಡು (ನಾಟ್ಟು ನಾಟ್ಟು) ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧಿಸಲಿದೆ. ಸೋಮವಾರ ರಾತ್ರಿ ಈ ಕುರಿತು ಗೋಲ್ಡನ್​ ಗ್ಲೋಬ್​ನಿಂದ ಅಧಿಕೃತ ಘೋಷಣೆಯಾಗಿದೆ.

ಘೋಷಣೆಯ ನಂತರ ಪ್ರಶಸ್ತಿಗೆ ನಾಮಿನೇಟ್​ ಆಗಿರುವ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಸಂತೋಷ ವ್ಯಕ್ತಪಡಿಸಿರುವ ರಾಜಮೌಳಿ, 'ನಮ್ಮ ಚಿತ್ರವನ್ನು ಎರಡು ವಿಭಾಗಗಳಲ್ಲಿ ಆಯ್ಕೆ ಮಾಡಿರುವ ಗೋಲ್ಡನ್​ ಗ್ಲೋಬ್​ ಆಯ್ಕೆ ಸಮಿತೆಗೆ ಧನ್ಯವಾದಗಳು. ಪ್ರೇಕ್ಷಕರು ಮತ್ತು ಅಭಿಮಾನಿಗಳು ನಮಗೆ ತೋರಿಸಿರುವ ಪ್ರೀತಿಗೆ ನಾನು ಯಾವತ್ತೂ ಚಿರಋಣಿ' ಎಂದು ಬರೆದುಕೊಂಡಿದ್ದಾರೆ.

ಇನ್ನು, ಆಸ್ಕರ್​ ಪ್ರಶಸ್ತಿಗೆ ಈ ಚಿತ್ರ ಒಟ್ಟು 15 ವಿಭಿನ್ನ ವಿಭಾಗಗಳಿಗೆ ನಾಮನಿರ್ದೇಶನಗೊಂಡಿದೆ. ಇದಕ್ಕೂ ಮುನ್ನ, 'ಆರ್​.ಆರ್.ಆರ್​' ಚಿತ್ರದ ನಿರ್ದೇಶನಕ್ಕೆ ರಾಜಮೌಳಿ ಅವರಿಗೆ ಪ್ರತಿಷ್ಠಿತ ನ್ಯೂಯಾರ್ಕ್​​ ಫಿಲಂ ಕ್ರಿಟಿಕ್ಸ್​ ಸರ್ಕಲ್​ನಿಂದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net