

ತಮಿಳಿನಲ್ಲಿ ಈ ವರ್ಷದ ಬಹುನಿರೀಕ್ಷಿತ ಚಿತ್ರವೆಂದರೆ, ಅದು ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ 'ಮಾಸ್ಟರ್'. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರ ಬಿಡುಗಡೆಯಾಗಿಯೇ ಮೂರು ತಿಂಗಳಾಗಿರಬೇಕಿತ್ತು. ಆದರೆ, ಅಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದರಿಂದ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಯಿತು.
ಚಿತ್ರದ ರಿಲೀಸ್ ಮುಂದಕ್ಕೇನೋ ಹೋಯಿತು? ಆ ನಂತರ ಯಾವಾಗ ಎಂದು ಚಿತ್ರತಂಡದವರಿಗೂ ಸ್ಪಷ್ಟತೆ ಇರಲಿಲ್ಲ, ವಿಜಯ್ ಅವರ ಅಭಿಮಾನಿಗಳಿಗೂ ಇರಲಿಲ್ಲ. ಕೊನೆಗೆ ಜೂನ್ 22ಕ್ಕೆ ಬಿಡುಗಡೆ ಮಾಡಿದರೆ ಹೇಗೆ ಎಂಬ ಯೋಚನೆ, ಚಿತ್ರತಂಡದವರಿಗೆ ಬಂತು.
ಜೂನ್ 22ಕ್ಕೇ ಬಿಡುಗಡೆ ಯಾಕೆ ಎಂದರೆ ಅಂದು ವಿಜಯ್ ಅವರ ಹುಟ್ಟುಹಬ್ಬ. ಆ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಿದರೆ, ವಿಜಯ್ ಅಭಿಮಾನಿಗಳೂ ಖುಷಿಯಾಗುತ್ತಾರೆ ಎಂಬುದು ಚಿತ್ರತಂಡದ ನಂಬಿಕೆಯಾಗಿತ್ತು. ಆದರೆ, ಬಿಡುಗಡೆಯ ದಿನಾಂಕ ಹತ್ತಿರ ಬಂದರೂ, ಲಾಕ್ಡೌನ್ ತೆರವಾಗಲಿಲ್ಲ. ಚಿತ್ರ ಪ್ರದರ್ಶನ ಪ್ರಾರಂಭವಾಗಲೃ ಇಲ್ಲ.
ಈಗಲೂ ಈ ಗೊಂದಲವೇನೋ ಮುಂದುವರೆದಿದೆ. ಆದರೆ, ಚಿತ್ರತಂಡದವರು ಈ ಬಾರಿ ಎರಡು ಡೇಟ್ಗಳನ್ನಿಟ್ಟುಕೊಂಡು, ಆ ಎರಡು ದಿನಾಂಕಗಳಂದು ಚಿತ್ರ ಬಿಡುಗಡೆ ಮಾಡುವುದಕ್ಕೆ ಯೋಚಿಸುತ್ತಿದ್ದಾರೆ. ಇಷ್ಟಕ್ಕೂ ಆ ದಿನಾಂಕ ಯಾವುದು ಎಂಬ ಪ್ರಶ್ನೆ ಸಹಜವೇ.
ಒಂದು ಪಕ್ಷ ಸೆಪ್ಟೆಂಬರ್ ಹೊತ್ತಿಗೆ, ದೇಶದಲ್ಲಿ ಕರೊನಾ ನಿಯಂತ್ರಣಕ್ಕೆ ಬಂದರೆ, ದೀಪಾವಳಿಗೆ (ನವೆಂಬರ್ 14) ಚಿತ್ರ ಬಿಡುಗಡೆಯಾಗಲಿದೆಯಂತೆ. ಹಾಗೇನಾದರೂ ಆದರೆ, ಆಯುಧ ಪೂಜೆಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ದೀಪಾವಳಿಗೆ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ತೆರೆಗೆ ತರಬೇಕು ಎಂದು ಚಿತ್ರತಂಡ ಯೋಚಿಸಿದೆ.
ಇದನ್ನೂ ಓದಿ: ರಜನಿ ಬಳಿಕ ದಳಪತಿ ವಿಜಯ್ ಮನೆಗೆ ಬಾಂಬ್ ಬೆದರಿಕೆ..
ಒಂದು ಪಕ್ಷ ಅಷ್ಟರಲ್ಲಿ ತಹಬದಿಗೆ ಬರದಿದ್ದರೆ, ಮುಂದಿನ ಸಂಕ್ರಾಂತಿಗೆ ಚಿತ್ರವನ್ನು ಬಿಡುಗಡೆ ಮಾಡುವುದು ಚಿತ್ರತಂಡದ ಯೋಚನೆ. ಹೇಗೂ ಮುಂದಿನ ಸಂಕ್ರಾಂತಿಗೆ ಬಿಡುಗಡೆಯಾಗುವಂತಹ ಯಾವುದೇ ದೊಡ್ಡ ತಮಿಳು ಚಿತ್ರವಿಲ್ಲ. ಇದನ್ನು ಎನ್ಕ್ಯಾಶ್ ಮಾಡಿಕೊಳ್ಳಲು ಯೋಚಿಸಿರುವ ಚಿತ್ರತಂಡವು. ಕ್ರಿಸ್ಮಸ್ಗೆ ಟ್ರೇಲರ್ ಬಿಡುಗಡೆ ಮಾಡಿ, ಸಂಕ್ರಾಂತಿಗೆ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿಂತನೆ ನಡೆಸಿದೆ.
ಹೀಗೆ ಚಿತ್ರತಂಡದವರು ಎರಡೆರೆಡು ದಿನಾಂಕಗಳನ್ನಿಟ್ಟುಕೊಂಡಿದ್ದರೂ, ಸದ್ಯಕ್ಕೆ ಯಾವುದನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಇನ್ನಷ್ಟು ದಿನ ಕಾದು ನೋಡಿ, ಆ ನಂತರ ಬಿಡುಗಡೆ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.