ರಾಗಿ ಮುದ್ದೆ ತಿನ್ನೋದು ಹೇಳಿಕೊಟ್ಟಿದ್ದೇ ಡಾ. ರಾಜಕುಮಾರ್​!

Dr Rajkumar - Ambika - Final
Published on

ಲಾಕ್​ಡೌನ್​ ಸಮಯವು ಹಲವರಿಗೆ ಹಳೆಯದನ್ನೆಲ್ಲಾ ನೆನಪಿಸಿಕೊಳ್ಳುವ ಅವಕಾಶ ಕೊಟ್ಟಿದೆ. ಅದರಲ್ಲೂ, ಹಿರಿಯ ಕಲಾವಿದರಂತೂ ತಾವು ಚಿತ್ರರಂಗದಲ್ಲಿ ನಡೆದು ಬಂದ ಹಾದಿಯ ಬಗ್ಗೆ, ತಮ್ಮ ಚಿತ್ರಗಳ ಬಗ್ಗೆ ಹಲವು ವಿಷಯಗಳನ್ನು ಸೋಷಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಇನ್ನು ಸೋಷಿಯಲ್​ ಮೀಡಿಯಾಗೆ ಕೆಲವು ತಿಂಗಳುಗಳ ಹಿಂದಷ್ಟೇ ಎಂಟ್ರಿ ಕೊಟ್ಟ ತೆಲುಗಿನ 'ಮೆಗಾ ಸ್ಟಾರ್​' ಚಿರಂಜೀವಿ ಅವರು, ಆಗಾಗ ಕೆಲವು ಅಪರೂಪದ ಫೋಟೋಗಳನ್ನು ಹಂಚಿಕೊಳ್ಳುವುದರ ಜತೆಗೆ, ತಾವು ನಡೆದು ಬಂದ ಹಾದಿಯ ಬಗ್ಗೆ ಮಾತಾಡುತ್ತಿರುತ್ತಾರೆ.

ಈಗ ಹಿರಿಯ ನಟಿ ಅಂಬಿಕಾ ಸಹ ಅದೇ ಹಾದಿ ತುಳಿದಿದ್ದಾರೆ. ಒಂದು ಕಾಲದಲ್ಲಿ ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದವರು ಅಂಬಿಕಾ. ಬರೀ ಕನ್ನಡವಷ್ಟೇ ಅಲ್ಲ, ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳಲ್ಲಿಯೂ ಸುಪ್ರಸಿದ್ಧ ನಟಿ ಅವರು. ಎಲ್ಲಾ ಭಾಷೆಗಳಲ್ಲೂ ಜನಪ್ರಿಯ ನಟಿಯಾಗಿದ್ದ ಅವರು, ಆ ನಂತರ ಗಂಡ-ಮನೆ-ಮಕ್ಕಳು ಎಂದು ಬ್ರೇಕ್​ ತೆಗೆದುಕೊಂಡಿದ್ದ ಅವರು, ಕೆಲವು ವರ್ಷಗಳ ಹಿಂದೆ ಮತ್ತೆ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.

ಇತ್ತೀಚಿನ ವರ್ಷಗಳಲ್ಲಿ ಅಂಬಿಕಾ ಅವರು ತಮ್ಮ ಫೇಸ್​ಬುಕ್​ ಪೇಜ್​ ಮೂಲಕ, ತಮ್ಮ ಅಭಿಮಾನಿಗಳೊಂದಿಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಹಳೆಯ ಫೋಟೋಗಳು ಮತ್ತು ಕಥೆಗಳನ್ನು ಬಿಚ್ಚಿಟ್ಟಿದ್ದಾರೆ. ಈಗ ಅವರು ಡಾ. ರಾಜಕುಮಾರ್​ ಜತೆಗೆ ನಟಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ.

ಅಂಬಿಕಾ ಅವರು ಡಾ. ರಾಜಕುಮಾರ್​ ಅಭಿನಯದ 'ಚಲಿಸುವ ಮೋಡಗಳು', 'ಅಪೂರ್ವ ಸಂಗಮ', 'ಎರಡು ನಕ್ಷತ್ರಗಳು' ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಡಾ. ರಾಜಕುಮಾರ್​ ಅವರ ಜತೆಗೆ ನಟಿಸಿದ ಅನುಭವವನ್ನು ಹೇಳಿಕೊಂಡಿರುವ ಅಂಬಿಕಾ, ತನಗೆ ಮುದ್ದೆ ತಿನ್ನುವುದನ್ನು ಕಲಿಸಿದ್ದು ಡಾ. ರಾಜಕುಮಾರ್​ ಅವರೇ ಎಂದು ಹೇಳಿದ್ದಾರೆ.
'ಚಲಿಸುವ ಮೋಡಗಳು' ಚಿತ್ರೀಕರಣ ಸಮಯದಲ್ಲಿ ಡಾ. ರಾಜಕುಮಾರ್​ ಅವರು ಮೊದಲ ಬಾರಿಗೆ ರಾಗಿ ಮುದ್ದೆಯನ್ನು ಪರಿಚಯಿಸಿದರಂತೆ.

ಹಾಗೆಯೇ ಮುದ್ದೆ ತಿನ್ನುವುದು ಹೇಗೆ ಎಂದು ಹೇಳಿಕೊಟ್ಟರಂತೆ. ಅದಲ್ಲದೆ, ಡಾ. ರಾಜಕುಮಾರ್​ ಅವರು ಸಂಗೀತ ಸಂಜೆಗಳಲ್ಲಿ ಹಾಡುವಾಗ, ತಾವು ಸಹ ಅವರ ಜತೆಗೂಡಿ ಹಾಡುತ್ತಿದ್ದಾಗಿ ಅಂಬಿಕಾ ನೆನಪಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net