

ಇತ್ತೀಚೆಗಷ್ಟೇ ಸೂಪರ್ಸ್ಟಾರ್ ರಜನಿಕಾಂತ್ ಮನೆ ಬಳಿ ಬಾಂಬ್ ಇಡಲಾಗಿದೆ ಎಂಬ ಫೋನ್ ಕರೆ ರಜನಿ ಅಭಿಮಾನಿಗಳನ್ನು ನಿದ್ದೆಗೆಡಿಸಿತ್ತು. ಪೊಲೀಸ್ ಇಲಾಖೆಗೂ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು. ಬಳಿಕ ಆ ಫೋನ್ ಕರೆ ಸುಳ್ಳೆಂದು ಗೊತ್ತಾಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದರು ಬಾಂಬ್ ನಿಷ್ಕ್ರೀಯ ದಳದ ಅಧಿಕಾರಿಗಳು, ಇದೀಗ ಅದೇ ರೀತಿ ದಳಪತಿ ವಿಜಯ್ಗೂ ಅಂಥದ್ದೇ ಕರೆ ಬಂದಿದೆ.
ನಟ ವಿಜಯ್, ಕರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿದ್ದಾರೆ. ಕುಟುಂಬದೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಇದೇ ಸಮಯವನ್ನು ಗಮನದಲ್ಲಿಟ್ಟುಕೊಂಡು, ಕಿಡಿಗೇಡಿಯೊಬ್ಬ ಸಾಲಿಗ್ರಾಮಮ್ನಲ್ಲಿನ ವಿಜಯ್ ಮನೆಯ ಆವರಣದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವಿಚಾರವನ್ನು ಸ್ವತಃ ಪೊಲೀಸ್ ಇಲಾಖೆಗೆ ತಿಳಿಸಿದ್ದಾನೆ. ಗಾಬರಿಯಿಂದ ವಿಜಯ್ ಮನೆಗೆ ಬಂದ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ತೆರಳಿ ಪರಿಶೀಲಿಸಿದೆ. ಅದಾದ ಬಳಿಕ ಗೊತ್ತಾಗಿದ್ದು, ಇದೊಂದು ಪ್ರಾಂಕ್ ಫೋನ್ ಕಾಲ್ ಎಂದು.
ಗಾಬರಿಯಲ್ಲಿ ಮನೆ ಬಳಿ ಆಗಮಿಸಿದ ಸಿಬ್ಬಂದಿ, ವಿಜಯ್ ಅವರ ಕುಟುಂಬದೊಟ್ಟಿಗೆ ಮಾತನಾಡಿದೆ. ಮನೆ ಸುತ್ತ ಮುತ್ತ ಪರೀಕ್ಷೆ ನಡೆಸಿ, ಬಾಂಬ್ ರೀತಿಯ ವಸ್ತುಗಳು ಪತ್ತೆಯಾಗದ ಕಾರಣ, ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮರಳಿದೆ. ಬಳಿಕ ಇದೊಂದು ಪ್ರಾಂಕ್ ಕರೆ ಎಂಬುದು ಮೇಲಾಧಿಕಾರಿಗಳಿಂದ ಆದೇಶ ಬಂದ ನಂತರ ನಿಟ್ಟುಸಿರು ಬಿಟ್ಟಿದ್ದಾರೆ ಸಿಬ್ಬಂದಿ. ಯುವಕನೋರ್ವ ಮರಕ್ಕನಮ್ನಿಂದ ಈ ಕರೆ ಮಾಡಿದ್ದಾನೆ ಎಂಬುದು ಗೊತ್ತಾಗಿದೆ. (ಏಜೆನ್ಸೀಸ್)