ಹೈದರಾಬಾದ್: ಟಾಲಿವುಡ್‌ನಲ್ಲಿ 'ಮಾಸ್ ಮಹಾರಾಜ' ಎಂದೇ ಖ್ಯಾತರಾಗಿರುವ ನಟ ರವಿತೇಜ ಶೀಘ್ರದಲ್ಲೇ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಸದ್ಯ, ಕೈತುಂಬಾ ಇರುವ ಸಿನಿಮಾ ಆಫರ್‌ಗಳಲ್ಲೇ ಬ್ಯೂಸಿಯಾಗಿರುವ ನಟ ಮೆಗಾ ಸ್ಟಾರ್ ಚಿರಂಜೀವಿ ಅವರ ಹೆಸರಿಡದ ಮುಂಬರುವ ಚಿತ್ರ '#ಚಿರು154' ನಲ್ಲಿ ಈ ಜೋಡಿ ಅಭಿಮಾನಿಗಳನ್ನು ರಂಜಿಸುವ ಅವಕಾಶವಿದೆ. ಹೌದು, ರವಿತೇಜ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರಕ್ಕೆ ಬಾಬಿ ಅವರು ನಿರ್ದೇಶಕರಾಗಿದ್ದಾರೆ. ಇನ್ನು, ಎಲ್ಲವೂ ಅಂದುಕೊಂಡಂತೆ ನಡೆದರೆ '#ಚಿರು154' ನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ಸಹೋದರನಾಗಿ ನಟ ರವಿತೇಜ ತೆರೆ ಮೇಲೆ ಮಿಂಚಲಿದ್ದಾರೆ. ಅಂದಹಾಗೆ, ನಟ ರವಿತೇಜ ಮತ್ತು ಮೆಗಾ ಸ್ಟಾರ್ ಚಿರಂಜೀವಿ ಅವರು ಈ ಹಿಂದೆಯೇ ಒಮ್ಮೆ ತೆರೆ ಹಂಚಿಕೊಂಡಿದ್ದಾರೆ.