

ಮುಂಬೈ : ಬಾಲಿವುಡ್ ನಟಿಯರನ್ನು ನೋಡಿ ಮನಸೋಲದವರಿಲ್ಲ. ಅದರಲ್ಲೂ ಸಣ್ಣ ನಡುವನ್ನು ಕುಲುಕುತ್ತಾ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡಿರುವ ಮಲೈಕಾ ಅರೋರಾ ಅವರಂಥ ಫಿಟ್ ಪರ್ಸನಾಲಿಟಿ ಹೊಂದಿರುವವರಿಗೆ ಲಕ್ಷಾಂತರ ಅಭಿಮಾನಿಗಳು.
ಅಂದ ಹಾಗೆ ಪ್ರತಿ ಸೋಮವಾರ ಒಳ್ಳೆಯ ಯೋಗ ಪೋಸ್ಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವುದು ಮಲೈಕಾರ ವಾಡಿಕೆಯಾಗಿದೆ. ಇದನ್ನು ಮಲೈಕಾಸ್ ಮೂವ್ ಆಫ್ ದ ವೀಕ್ ಶೀರ್ಷಿಕೆಯಲ್ಲಿ ಅವರು, 12.8 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತಾರೆ. ಫಿಟ್ನೆಸ್ ಬಗ್ಗೆ ಬಹಳ ಕಾಳಜಿ ವಹಿಸುವ ಮಲೈಕಾ ಇವತ್ತಿನ ಪೋಸ್ಟ್ನಲ್ಲಿ ನಡುವಿಗೆ ಬಲ ಕೊಡುವ ವಿಶೇಷ ಯೋಗಾಸನದ ಬಗ್ಗೆ ಬರೆದಿದ್ದಾರೆ. ಅದೆಂದರೆ ನೌಕಾಸನ !
ನೌಕಾಸನ ಅಥವಾ ಬೋಟ್ ಪೋಸ್ ಮಾಡುತ್ತಿರುವ ತಮ್ಮ ಆಕರ್ಷಕ ಚಿತ್ರದೊಂದಿಗೆ ಮಲೈಕಾ ಈ ಆಸನವನ್ನು ಮಾಡುವ ವಿಧಾನವನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಹೊಟ್ಟೆಯ ಮತ್ತು ನಡುವಿನ ಸ್ನಾಯುಗಳನ್ನು ಬಲಪಡಿಸಿಕೊಳ್ಳಲು ಮತ್ತು ಆತ್ಮವಿಶ್ವಾಸ, ಇಚ್ಛಾಶಕ್ತಿ ಮತ್ತು ಸ್ವಯಂನಿಯಂತ್ರಣ ಹೆಚ್ಚಿಸಲು ಈ ಆಸನ ಬಹಳ ಉಪಯುಕ್ತ ಎಂದಿದ್ದಾರೆ. 'ನೀವೂ ನೌಕಾಸನ ಮಾಡಿ ನಿಮ್ಮ ಫೋಟೋವನ್ನು ಶೇರ್ ಮಾಡಿ, ನನ್ನನ್ನು ಟ್ಯಾಗ್ ಮಾಡಿ' ಎಂದು ಆಸಕ್ತರಿಗೆ ಕರೆ ನೀಡಿದ್ದಾರೆ. (ಏಜೆನ್ಸೀಸ್)