ಒಂದು ಹಣ್ಣಿಗೆ 1,000 ರೂ. ಬೆಲೆ ಬಾಳುವ ನೂರ್​ಜಹಾನ್ ಮಾವಿನಹಣ್ಣು!

mango
Published on

ಇಂದೋರ್: ಇನ್ನೇನು ಮಾವಿನಹಣ್ಣಿನ ಸೀಸನ್ ಮುಗಿದೇ ಹೋಗುತ್ತೆ ಎನ್ನುವ ಈ ಸಮಯದಲ್ಲಿ ಮಧ್ಯಪ್ರದೇಶದಲ್ಲಿ ಒಂದು ವಿಶಿಷ್ಟ ತಳಿಯ ಮಾವಿನಮರ ಈಗ ಫಸಲು ನೀಡಲು ಆರಂಭಿಸಿದೆ. ಅದೆಂದರೆ ಗುಜರಾತ್​ ಗಡಿಯಲ್ಲಿರುವ ಅಲಿರಜ್​ಪುರ ಜಿಲ್ಲೆಯ ಕಥ್ಥಿವಾಡ ಪ್ರದೇಶದಲ್ಲಿ ಮಾತ್ರ ಬೆಳೆಯುವ ನೂರ್​ಜಹಾನ್ ಮಾವಿನಹಣ್ಣು !

ಬೇರೆ ಹಣ್ಣುಗಳು ಡಜನ್​ಗಟ್ಟಲೆ ಸಿಗುವ ಹಣದಲ್ಲಿ ಒಂದೇ ನೂರ್​ಜಹಾನ್​ ಹಣ್ಣು ಮಾರಾಟವಾಗುತ್ತದೆ ಎಂಬುದು ವಿಶೇಷ. ಒಂದು ಹಣ್ಣಿಗೆ 500 ರಿಂದ 1,000 ರೂ.ಗಳವರೆಗೆ ಹಣ ತೆತ್ತು ಖರೀದಿಸಲು ಗ್ರಾಹಕರು ಸಿದ್ಧವಾಗಿರುತ್ತಾರಂತೆ ! ಇನ್ನು ಈ ಹಣ್ಣಿನ ಗಾತ್ರವೂ ತುಂಬಾ ದೊಡ್ಡದು. ಒಂದು ಅಡಿಗೂ ಹೆಚ್ಚು ಉದ್ದ ಬೆಳೆಯುವ ಈ ಮಾವಿನ ಹಣ್ಣು 2 ರಿಂದ 3.5 ಕೆಜಿಗಳಷ್ಟು ತೂಕ ಹೊಂದಿರುತ್ತವೆ.

"ನನ್ನ ತೋಟದಲ್ಲಿರುವ ಮೂರು ನೂರ್​ಜಹಾನ್ ಮಾವಿನಮರಗಳಲ್ಲಿ 250 ಹಣ್ಣುಗಳು ಬೆಳೆದಿವೆ. ಸಾಮಾನ್ಯವಾಗಿ ಜನವರಿ-ಫೆಬ್ರವರಿಯಲ್ಲಿ ಹೂವು ಬಿಡಲು ಆರಂಭಿಸಿ, ಜೂನ್ ತಿಂಗಳು ಶುರುವಾದಂತೆ ಹಣ್ಣು ನೀಡುತ್ತವೆ. ಈ ಹಣ್ಣುಗಳ ಅಡ್ವಾನ್ಸ್​ ಬುಕಿಂಗ್ ಆಗಲೇ ಆರಂಭವಾಗಿದೆ" ಎಂದು ಕತ್ಥಿವಾಡದ ರೈತ ಶಿವರಾಜ್​ ಸಿಂಗ್​ ಜಾಧವ್​ ಹೇಳಿದ್ದಾರೆ. ಮಧ್ಯಪ್ರದೇಶ ಮತ್ತು ಗುಜರಾತ್​ನ ಜನರೇ ಈ ಹಣ್ಣಿಗೆ ಮುಖ್ಯ ಗ್ರಾಹಕರು ಎನ್ನಲಾಗಿದೆ.

ಕಳೆದ ಬಾರಿಗಿಂತ ಈ ವರ್ಷ ಫಸಲು ಚೆನ್ನಾಗಿ ಬಂದಿದ್ದರೂ, ಕರೊನಾದಿಂಗಾಗಿ ವ್ಯಾಪಾರಕ್ಕೆ ಹೊಡೆತ ಬೀಳಬಹುದೆಂದು ಮತ್ತೊಬ್ಬ ಬೆಳೆಗಾರ ಇಶಖ್​ ಮನ್ಸೂರಿ ಹೇಳಿದ್ದಾರೆ. 2019 ರಲ್ಲಿ ತಮ್ಮ ತೋಟದಲ್ಲಿ ಒಂದೊಂದು ನೂರ್​ಜಹಾನ್ ಹಣ್ಣು ಸುಮಾರು 2.75 ಕೆಜಿ ತೂಕ ಹೊಂದಿದ್ದು, ಒಂದಕ್ಕೆ 1,200 ರೂ. ಬೆಲೆಯಲ್ಲಿ ಮಾರಾಟವಾಗಿದ್ದವು ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net