

ದರ್ಬನ್ : ದಕ್ಷಿಣ ಆಫ್ರಿಕಾದ ಎಚ್ಐವಿ ಸೋಂಕಿತ ಮಹಿಳೆಯೊಬ್ಬಳ ದೇಹದಲ್ಲಿ ಅತ್ಯಂತ ಅಪಾಯಕಾರಿಯಾದ ಕರೊನಾ ವೈರಸ್ ರೂಪಾಂತರಗಳನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ದುರ್ಬಲ ರೋಗನಿರೋಧಕತೆಯುಳ್ಳ ಈ ಮಹಿಳೆಯ ದೇಹದಲ್ಲಿ 216 ದಿನಗಳಿಂದ ಕರೊನಾ ವೈರಸ್ ಬೀಡುಬಿಟ್ಟಿದ್ದು, ಈವರೆಗೆ 32 ಬಾರಿ ರೂಪಾಂತರ ಹೊಂದಿದೆ ಎನ್ನಲಾಗಿದೆ.
ಮಹಿಳೆಯೊಬ್ಬಳು 2006 ರಲ್ಲಿ ಎಚ್ಐವಿ ಪಾಸಿಟಿವ್ ಆಗಿದ್ದು, ಕಾಲಕ್ರಮೇಣ ಅತಿ ದುರ್ಬಲ ರೋಗನಿರೋಧಕತೆ ಹೊಂದಿದ್ದಳು. ಈಕೆಗೆ ಸೆಪ್ಟೆಂಬರ್ 2020ರಲ್ಲಿ ಕರೊನಾ ಸೋಂಕು ತಗುಲಿದ್ದು, ಅವಳ ಶರೀರದಲ್ಲಿ ನಿರಂತರ ರೂಪಾಂತರಗಳನ್ನು ಈ ವೈರಸ್ ಹೊಂದುತ್ತಲೇ ಇದೆ. ಈವರೆಗೆ ವೈರಸ್ ಸ್ಪೈಕ್ ಪ್ರೋಟೀನ್ನಲ್ಲಿ 13 ಮ್ಯುಟೇಶನ್ಗಳನ್ನು ಮತ್ತು 19 ಇತರ ಜೆನೆಟಿಕ್ ಶಿಫ್ಟ್ಗಳನ್ನು ತೋರಿಸಿದೆ ಎನ್ನಲಾಗಿದೆ.
ಈ ಮಹಿಳೆಯ ಕೇಸ್ ಸ್ಟಡಿಯನ್ನು ಮೆಡ್ಆರ್ಕ್ಸೀವ್ ಮೆಡಿಕಲ್ ಜರ್ನಲ್ನಲ್ಲಿ ಪ್ರಕಟಿಸಲಾಗಿದ್ದು, ಎಚ್ಐವಿ ಸೋಂಕಿತರಲ್ಲಿ ಕರೊನಾ ವೈರಸ್ ಆತಂಕಕಾರಿಯಾಗಿ ರೂಪಾಂತರಗೊಳ್ಳಬಹುದು ಎಂಬ ಕಳವಳ ವ್ಯಕ್ತಪಡಿಸಲಾಗಿದೆ. ದರ್ಬನ್ನ ಕ್ವಾಜುಲು ನಟಾಲ್ ಯೂನಿವರ್ಸಿಟಿಯ ಪ್ರೊಫೆಸರ್ ಟೂಲಿಯೊ ಡಿ ಒಲಿವೇರಾ ಈ ಅಧ್ಯಯನ ವರದಿಯ ಲೇಖಕಿಯಾಗಿದ್ದು, ರೋಗನಿರೋಧಕತೆ ಹತ್ತಿಕ್ಕಲ್ಪಟ್ಟಿರುವ ಜನರ ಶರೀರದಲ್ಲಿ ಕರೊನಾ ವೈರಸ್ ಹೆಚ್ಚು ಕಾಲ ಜೀವಿಸುತ್ತದೆ ಎಂದಿದ್ದಾರೆ. (ಏಜೆನ್ಸೀಸ್)