

ಬೆಂಗಳೂರು: ‘ಡಾರ್ಲಿಂಗ್ ಕೃಷ್ಣ’ ಮತ್ತು ರಚಿತಾ ರಾಮ್, ‘ಲವ್ ಮಿ ಆರ್ ಹೇಟ್ ಮಿ’ ಚಿತ್ರದಲ್ಲಿ ಜತೆಯಾಗಿ ನಟಿಸುತ್ತಿದ್ದಾರೆ ಎಂಬುದು ನಾಲ್ಕು ದಿನಗಳ ಹಿಂದಿನ ಸುದ್ದಿ. ಗೌರಿ ಹಬ್ಬದ ದಿನ, ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಸರಳವಾಗಿ ಚಿತ್ರದ ಮುಹೂರ್ತವಾಗಿದೆ. ಕೃಷ್ಣ ಅಭಿನಯದ ಮೊದಲ ದೃಶ್ಯಕ್ಕೆ ಮಿಲನಾ ಕ್ಲಾಪ್ ಮಾಡಿದರೆ, ದಿನಕರ್ ತೂಗುದೀಪ ಕ್ಯಾಮೆರಾ ಚಾಲನೆ ಮಾಡಿದ್ದಾರೆ.
ಕೃಷ್ಣಗೆ ಪ್ರೇಮಕಥೆಗಳೆಂದರೆ ಬಹಳ ಇಷ್ಟವಂತೆ. ಅದೇ ಕಾರಣಕ್ಕೆ ಪ್ರೇಮಕಥೆಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರಂತೆ. ‘ಇದೊಂದು ಒಳ್ಳೆಯ ಕಥೆ. ಕಾಲೇಜ್ ಹುಡುಗನಾಗಿ ಹಾಗೂ ಕಾಲೇಜ್ ನಂತರದ ದಿನಗಳ ಎರಡು ಶೇಡ್‌ಗಳ ಪಾತ್ರ ನನಗೆ ಸಿಕ್ಕಿದೆ. ನನಗೆ ಪ್ರೇಮಕಥೆಗಳು ಇಷ್ಟ. ಹಾಗಾಗಿ, ಹೆಚ್ಚಾಗಿ ಅದನೇ ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಮತ್ತು ರಚಿತಾ ರಾಮ್ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿದ್ದೇವೆ. ನಾವಿಬ್ಬರೂ ಒಂದೇ ದಿನ ಚಿತ್ರರಂಗ ಪ್ರವೇಶಿಸಿದವರು. ಎಂಟು ವರ್ಷಗಳ ಹಿಂದೆ ನನ್ನ ‘ಮದರಂಗಿ’, ರಚಿತಾ ಅವರ ‘ಬುಲ್ಬುಲ್’ ಒಂದೇ ದಿನ ತೆರೆ ಕಂಡಿತ್ತು. ಇಷ್ಟು ವರ್ಷಗಳ ನಂತರ ಈಗ ಒಂದೇ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಕೂಡಿ ಬಂದಿದೆ’ ಎನ್ನುತ್ತಾರೆ ಕೃಷ್ಣ.
ಇದನ್ನೂ ಓದಿ: ‘ಪುರುಷೋತ್ತಮ’ ಹಾಡಿದಾಗ … ಹೊರಬಂತು ಚಿತ್ರದ ಗೀತೆಗಳು
ತೂಗುದೀಪ ಸಂಸ್ಥೆಯ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ದೀಪಕ್ ಗಂಗಾಧರ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸುತ್ತಿದ್ದಾರೆ. ಆ ಐದೂ ಹಾಡುಗಳನ್ನು ಕವಿರಾಜ್ ಬರೆಯಲಿದ್ದಾರೆ ಎನ್ನುವುದು ವಿಶೇಷ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡುತ್ತಿರುವ ಈ ಚಿತ್ರವನ್ನು ಸುನೀಲ್ ಮತ್ತು ಮದನ್ ನಿರ್ಮಿಸುತ್ತಿದ್ದಾರೆ.