

Kunal Kamra : ಅತ್ಯಂತ ವಿವಾದಾತ್ಮಕ ಶೋ ಯಾವುದು ಅಂತ ಕೇಳಿದರೆ ಮೊದಲು ನೆನಪಿಗೆ ಬರುವುದು ಬಿಗ್ಬಾಸ್ ರಿಯಾಲಿಟಿ ಶೋ. ಇಲ್ಲಿ ಮನರಂಜನೆಗಿಂತ ಕಿತ್ತಾಟ ಮತ್ತು ವಾಗ್ವಾದವೇ ಜಾಸ್ತಿ. ಹೀಗಾಗಿಯೇ ಈ ಶೋಗೆ ವಿವಾದ ಹುಟ್ಟು ಹಾಕುವವರನ್ನೇ ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡುತ್ತಾರೆ. ಇತ್ತೀಚೆಗೆ ತಮ್ಮ ಮಾತಿನ ಮೂಲಕ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡ ಸ್ಟ್ಯಾಂಡಪ್ ಕಾಮೆಡಿಯನ್ ಕುನಾಲ್ ಕಮ್ರಾರನ್ನು ಹಿಂದಿ ಬಿಗ್ಬಾಸ್ ಸೀಸನ್ಗೆ ಬರುವಂತೆ ಆಫರ್ ನೀಡಲಾಗಿತ್ತು. ಆದರೆ, ಆ ಆಫರ್ ತಿರಸ್ಕರಿಸಿ ಕುನಾಲ್ ಕಮ್ರಾ ಹೇಳಿದ ಮಾತು ಇದೀಗ ಭಾರೀ ವೈರಲ್ ಆಗಿದೆ.
ಮೊದಲಿಗೆ ಕುನಾಲ್ ಕಮ್ರಾ ಹುಟ್ಟುಹಾಕಿದ ವಿವಾದ ಏನು ಎಂಬುದನ್ನು ತಿಳಿದುಕೊಳ್ಳೋಣ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕುನಾಲ್, ಏಕನಾಥ್ ಶಿಂಧೆ ಅವರು ಬಿಜೆಪಿ ಜತೆ ಹೊಂದಣಿಕೆ ಮಾಡಿಕೊಂಡು ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ ಎಂದು ಹಾಸ್ಯ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ, ಹೊಸ ವಿವಾದ ಹುಟ್ಟಿಕೊಂಡಿತು. ಕುನಾಲ್ ವಿರುದ್ಧ ಎಫ್ಐಆರ್ ಸಹ ದಾಖಲಿಸಲಾಗಿತ್ತು. ಅಲ್ಲದೇ, ಅನೇಕ ರಾಜಕೀಯ ನಾಯಕರು ಕುನಾಲ್ ಮಾತಿಗೆ ಆಕ್ರೋಶ ಹೊರಹಾಕಿದ್ದರು.
ಬಿಗ್ಬಾಸ್ ಶೋ ಕಾಸ್ಟಿಂಗ್ ಏಜೆಂಟ್ ಜತೆ ನಡೆದ ಸಂಭಾಷಣೆಯ ಸ್ಕ್ರೀನ್ ಶಾಟ್ ಅನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕುನಾಲ್, ತನಗೆ ಬಿಗ್ಬಾಸ್ ಆಫರ್ ಬಂದಿತ್ತು ಎಂದಿದ್ದಾರೆ. ಈ ಬಾರಿಯ ಬಿಗ್ಬಾಸ್ ಸೀಸಸ್ನ ಕಾಸ್ಟಿಂಗ್ ಅನ್ನು ನಾನು ನಿರ್ವಹಿಸುತ್ತಿದ್ದೇನೆ. ನಿಮ್ಮ ಆಯ್ಕೆ ಆಸಕ್ತಿದಾಯಕ ಎನಿಸಬಹುದು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಿಮ್ಮ ನಿಜವಾದ ಉತ್ಸಾಹವನ್ನು ತೋರಿಸಲು ಮತ್ತು ಬೃಹತ್ ಪ್ರೇಕ್ಷಕರನ್ನು ತಲುಪಲು ಇದೊಂದು ಹುಚ್ಚು ವೇದಿಕೆಯಾಗಿದೆ. ನೀವು ಇದರಲ್ಲಿ ಭಾಗವಹಿಸುವಿರಾ? ನಿಮ್ಮ ಅಭಿಪ್ರಾಯವೇನು? ನಾವು ಅದರ ಬಗ್ಗೆ ಮಾತನಾಡಬಹುದೇ? ಎಂದು ಕಾಸ್ಟಿಂಗ್ ಏಜೆಂಟ್ ಮಾಡಿದ್ದಾರೆ ಎನ್ನಲಾದ ವಾಟ್ಸ್ಆ್ಯಪ್ ಚಾಟ್ನ ಸ್ಕ್ರೀನ್ಶಾಟ್ ಅನ್ನು ಕುನಾಲ್ ಹಂಚಿಕೊಂಡಿದ್ದಾರೆ.
ಕಾಸ್ಟಿಂಗ್ ಏಜೆಂಟ್ಗೆ ಪ್ರತಿಕ್ರಿಯೆ ನೀಡಿರುವ ಕುನಾಲ್, ಬಿಗ್ಬಾಸ್ ಶೋಗಿಂತ ನಾನು ಮಾನಸಿಕ ಆಸ್ಪತ್ರೆಗೆ ದಾಖಲಾಗುವುದು ಹೆಚ್ಚು ಉತ್ತಮ ಎಂದಿದ್ದಾರೆ. ಅಲ್ಲದೆ, ಸಲ್ಮಾನ್ ಖಾನ್ ಚಿತ್ರ 'ರಾಧೆ'ಯ ಹಾಡಿನೊಂದಿಗೆ ಇನ್ಸ್ಟಾ ಸ್ಟೋರಿಯನ್ನು ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ ಬಿಗ್ಬಾಸ್ OTTಯ ಮುಂದಿನ ಸೀಸನ್ಗಾಗಿ ಕುನಾಲ್ ಅವರನ್ನು ಸಂಪರ್ಕಿಸಲಾಗಿದೆಯೇ ಅಥವಾ ಬಿಗ್ಬಾಸ್ 19ರ ಸೀಸನ್ಗಾಗಿ ಸಂಪರ್ಕಿಸಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಕುನಾಲ್ ಅವರು ಇನ್ಸ್ಟಾ ಪೋಸ್ಟ್ ಮಾತ್ರ ವೈರಲ್ ಆಗುತ್ತಿದೆ. (ಏಜೆನ್ಸೀಸ್)