ಏಕನಾಥ್ ಶಿಂಧೆ ಬಗ್ಗೆ ಅಪಹಾಸ್ಯ; ಕಾಮಿಡಿಯನ್​ ಕುನಾಲ್​ ಕಮ್ರಾ ವಿರುದ್ಧ ಭುಗಿಲೆದ್ದ ಆಕ್ರೋಶ!; FIR ಸೇರಿದಂತೆ 40 ಜನರ ವಿರುದ್ಧ ದೂರು

dk - 2025-03-24T124442.996
Published on

FIR : ಮಹಾರಾಷ್ಟ್ರ ಮಾಜಿ ಸಿಎಂ ಏಕನಾಥ್ ಶಿಂಧೆ ಬಗ್ಗೆ ಅಲ್ಲಿನ ಹಾಸ್ಯನಟ, ಸ್ಟ್ಯಾಂಡ್​-ಅಪ್​ ಕಾಮಿಡಿಯನ್​ ಕುನಾಲ್​ ಕಮ್ರಾ ಮಾಡಿದ ಅಪಾಹಾಸ್ಯ(ಆರೋಪ) ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ರಾಜ್ಯದ್ಯಂತ ಆಕ್ರೋಶ ಭುಗಿಲೆದ್ದಿದೆ. ​

ಶಿವಸೇನಾ ನಾಯಕರು ನೀಡಿದ ದೂರಿನ ಮೇರೆಗೆ ಕುನಾಲ್​ ಕಮ್ರಾ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಅಲ್ಲದೆ, ಸ್ಟ್ಯಾಂಡ್​ಅಪ್​ ಕಾರ್ಯಕ್ರಮದ ಸ್ಟೂಡಿಯೋವನ್ನು ಧ್ವಂಸಗೊಳಿಸಿದ್ದಕ್ಕಾಗಿ 40 ಜನರ ಶಿವಸೇನಾ ಕಾರ್ಯರ್ತರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಕಾಮಿಡಿಯನ್ ಕುನಾಲ್​ ಕಮ್ರಾ ಹೇಳಿದ್ದೇನು..?

ಹಾಸ್ಯಮಯ ಮತ್ತು ತೀಕ್ಷಣವಾದ ಹೇಳಿಕೆಗಳಿಗೆ ಹೆಸರುವಾಸಿಯಾದ ಕುನಾಲ್​ ಕಮ್ರಾ, ಇದೀಗ ತಮ್ಮ ಕಾರ್ಯಕ್ರಮವೊಂದರಲ್ಲಿ ''ಏಕನಾಥ್​ ಶಿಂಧೆ ಬಿಜೆಪಿಯೊಂದಿಗೆ ಹೊಂದಣಿಕೆ ಮಾಡಿಕೊಂಡು ' ದೇಶದ್ರೋಹಿ' ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ'' ಎಂದು ಹಾಸ್ಯ ಮಾಡಿರುವ ವಿಡಿಯೋದಿಂದ ವಿವಾದಕ್ಕೆ ಸಿಲುಕಿದ್ದಾರೆ. ಅಲ್ಲದೇ ಇವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಈ ಹೇಳಿಕೆಗಳು ಶಿವಸೇನೆಯ (ಶಿಂಧೆ ಬಣ) ನಾಯಕರನ್ನು ಕೆರಳಿಸಿದ್ದು, ಭಾನುವಾರ ಮುಂಬೈನ ಖಾರ್ ಪ್ರದೇಶದಲ್ಲಿರುವ ಸ್ಟುಡಿಯೋ ಮತ್ತು ಹೋಟೆಲ್ ಯುನಿಕಾಂಟಿನೆಂಟಲ್ ಅನ್ನು ಧ್ವಂಸಗೊಳಿಸಿದರು. ವೀಡಿಯೊವನ್ನು ಈ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಹೀಗಾಗಿ, 40 ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿವಾದದ ಕೆಲವು ಗಂಟೆಗಳ ನಂತರ, ಹಾಸ್ಯನಟ ಸಣ್ಣ ಪೋಸ್ಟ್‌ನೊಂದಿಗೆ ಪ್ರತಿಕ್ರಿಯಿಸಿದ್ದಾರೆ. "ಮುಂದಿರುವ ಏಕೈಕ ದಾರಿ" ಎಂದು ಬರೆದುಕೊಂಡು ತನ್ನ ಎಕ್ಸ್​ ಖಾತೆಯಲ್ಲಿ ಸಂವಿಧಾನದ ಸಣ್ಣ ಪ್ರತಿಯನ್ನು ಹಿಡಿದಿರುವ ಫೋಟೋದೊಂದಿಗೆ ಹಂಚಿಕೊಂಡಿದ್ದಾರೆ.

ಇನ್ನು ಈ ವಿವಾದ ರಾಜ್ಯದ್ಯಂತ ಭುಗಿಲೆದಿದ್ದ ಹಿನ್ನೆಲೆ ಆಡಳಿತ ಮತ್ತು ವಿರೋಧ ಪಕ್ಷಗಳು ಕೆಸರೆರಚಾಟದಲ್ಲಿ ಮುಳುಗಿವೆ. ಶಿವಸೇನಾ ಶಾಸಕರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ ಮತ್ತು ಕಮ್ರಾಗೆ ಎರಡು ದಿನಗಳ ಗಡುವು ನೀಡಿದ್ದಾರೆ. ಅದು ವಿಫಲವಾದರೆ ಪೊಲೀಸ್ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಕಾಮಿಡಿಯನ್ ಕುನಾಲ್​ ಕಮ್ರಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net