ಸಲ್ಮಾನ್​ ಮನಸ್ಸು ನೋಯಿಸುವುದಕ್ಕೆ ಇಷ್ಟವಿಲ್ಲ ... ಉಲ್ಟಾ ಹೊಡೆದ ಕೆಆರ್​ಕೆ

Salman Khan - KRK - Final
Published on

ಮುಂಬೈ: ಬಾಲಿವುಡ್​ನ ಸ್ವಯಂಘೋಷಿತ ನಂಬರ್​ ಒನ್​ ವಿಮರ್ಶಕ ಮತ್ತು ಸಲ್ಮಾನ್ ಖಾನ್ ನಡುವಿನ ತಿಕ್ಕಾಟ ಗೊತ್ತೇ ಇದೆ. ಕೆಲವೇ ದಿನಗಳ ಹಿಂದಷ್ಟೇ ಸಲ್ಮಾನ್​ ಖಾನ್​ ಅವರ ವೃತ್ತಿಜೀವನವನ್ನೇ ನಾಶ ಮಾಡುವುದಾಗಿ ಘೋಷಿಸಿದ್ದ ಕೆಆರ್​ಕೆ, ಇದೀಗ ಸಲ್ಮಾನ್​ ಕುರಿತು ವಿಡಿಯೋಗಳನ್ನೆಲ್ಲಾ ಡಿಲೀಟ್​ ಮಾಡಿದ್ದಾರೆ. ಅಷ್ಟೇ ಅಲ್ಲ, ಇನ್ನು ಮುಂದೆ ಯಾವುದೇ ಕಾರಣಕ್ಕೂ ಸಲ್ಮಾನ್​ ಮನಸ್ಸು ನೋಯಿಸುವುದಿಲ್ಲ ಎಂದು ಹೃಳಿದ್ದಾರೆ.

ಮೇ 11ರಂದು ಸಲ್ಮಾನ್​ ಅಭಿನಯದ ರಾಧೇ ಬಿಡುಗಡೆಯಾಗಿತ್ತು. ಈ ಚಿತ್ರ ನೋಡಿದ ಕೆಆರ್​ಕೆ ಹಿಗ್ಗಾಮುಗ್ಗ ಬೈದು ವಿಮರ್ಶೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ, ಅವರ ವಿರುದ್ಧ ಸಲ್ಮಾನ್​ ಖಾನ್​ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಮೊದಲಿಗೆ, ಇನ್ನು ಮುಂದೆ ಸಲ್ಮಾನ್​ ಚಿತ್ರಗಳನ್ನು ವಿಮರ್ಶೆ ಮಾಡುವುದಿಲ್ಲ ಎಂದು ಹೇಳಿದ್ದ ಕಮಾಲ್​ ಆರ್​ ಖಾನ್​ ಅಲಿಯಾಸ್​ ಕೆಆರ್​ಕೆ, ಆ ನಂತರ ಉಲ್ಟಾ ಹೊಡೆದಿದ್ದರು. ಸಲ್ಮಾನ್​ ಖಾನ್​ ಬಂದು ಕಾಲು ಹಿಡಿದುಕೊಂಡರೂ, ಅವರ ಚಿತ್ರಗಳ ವಿಮರ್ಶೆ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದರು. ಅಷ್ಟೇ ಅಲ್ಲ, ಸಲ್ಮಾನ್​ ವಿರುದ್ಧ ಹರಿಹಾಯುವುದನ್ನು ಮುಂದುವರೆಸಿದ್ದರು.

ಈ ಬಗ್ಗೆ ಸಲ್ಮಾನ್​ ಮತ್ತೊಮ್ಮೆ ಕೋರ್ಟ್​ ಮೊರೆ ಹೋಗಿ, ಕೆಆರ್​ಕೆ ತಮ್ಮ ವಿರುರ್ದ್​ ಮಾತನಾಡುವುದನ್ನು ನಿಗ್ರಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಅದಕ್ಕೆ ಪ್ರತಿಯಾಗಿ ಗುರುವಾರವಷ್ಟೇ ನ್ಯಾಯಾಲಯವು, ಸಲ್ಮಾನ್​ ವಿರುದ್ಧ ಯಾವುದೇ ಅವಹೇಳನಕಾರಿ ಪೋಸ್ಟ್​ಗಳನ್ನು ಹಾಕದಂತೆ ಕೆಆರ್​ಕೆಗೆ ಆದೇಶಿಸಿತ್ತು.

ನ್ಯಾಯಾಲಯದ ಮಾತಿಗೆ ಗೌರವ ಕೊಟ್ಟಿರುವ ಕೆಆರ್​ಕೆ, ಸಲ್ಮಾನ್​ ಅವರ ವಿಡಿಯೋಗಳನ್ನು ಡಿಲೀಟ್​ ಮಾಡಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, 'ನನಗೆ ಸಲ್ಮಾನ್​ ಅವರನ್ನು ನೋಯಿಸುವ ಉದ್ದೇಶವಿಲ್ಲವಾದ್ದರಿಂದ, ಅವರ ಕುರಿತಾದ ಎಲ್ಲ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದ್ದೇನೆ. ಇನ್ನು, ಸಲ್ಮಾನ್​ ವಿರುದ್ಧದ ನನ್ನ ಹೋರಾಟ ನ್ಯಾಯಾಲಯದಲ್ಲಿ ಮುಂದುವರೆಯುತ್ತದೆ. ಕೋರ್ಟ್​ನಿಂದ ಅನುಮತಿ ಸಿಕ್ಕರೆ ಮಾತ್ರ ನಾನು ಸಲ್ಮಾನ್​ ಅವರ ಮುಂದಿನ ಚಿತ್ರಗಳನ್ನು ವಿಮರ್ಶೆ ಮಾಡುತ್ತೇನೆ. ಒಂದು ಪಕ್ಷ ನಾನ್ಯಾವುದಾದರೂ ವಿಡಿಯೋ ಬಿಟ್ಟಿದ್ದರೆ, ಅದನ್ನು ನನ್ನ ಗಮನಕ್ಕೆ ತಂದರೆ, ಖಂಡಿತಾ ಡಿಲೀಟ್​ ಮಾಡುತ್ತೇನೆ' ಎಂದು ಬಹಳ ವಿನಮ್ರರಾಗಿ ಹೇಳಿಕೊಂಡಿದ್ದಾರೆ ಕೆಆರ್​ಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net