ಅನುಪಮ್​ ಖೇರ್ ಯಾರೂ ಅಂತಲೇ ಗೊತ್ತಿಲ್ಲವಂತೆ ...

Anupam Kher - Final
Published on

ಡೆಹ್ರಾಡೂನ್​: ಬಾಲಿವುಡ್​ ನಟ ಅನುಪಮ್​ ಖೇರ್​ ಯಾರಿಗೆ ಗೊತ್ತಿಲ್ಲ ಹೇಳಿ? 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅನುಪಂಗೆ ದೇಶ-ವಿದೇಶಗಳಲ್ಲಿ ಅಭಿಮಾನಿಗಳು ಇದ್ದಾರೆ. ಆದರೆ, ಅನುಪಮ್​ ಖೇರ್​ ಯಾರು ಅಂತಲೇ ಗೊತ್ತಿಲ್ಲ ಅಂತ ಗ್ಯಾನ್​ಚಂದ್​ ಎನ್ನುವವರು ಹೇಳಿದ್ದಾರೆ. ಅವರು ಹಾಗೆ ಹೇಳುವ ಮೂಲಕ, ಅನುಪಮ್​ ನಂಬಿಕೆ ನುಚ್ಚುನೂರಾಗಿದೆಯಂತೆ.

ಅನುಪಮ್ ಖೇರ್​ ಇತ್ತೀಚೆಗೆ ತಮ್ಮ ಹಿಮಾಚಲ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ವಾಕಿಂಗ್​ ಹೋದ ಸಂದರ್ಭದಲ್ಲಿ ಅವರೊಂದು ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ, ಅವರು 2,222 ಹೆಜ್ಜೆ ಹಾಕಿ ಖುಷಿಪಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಎದುರಿಗೆ ಒಬ್ಬ ವ್ಯಕ್ತ ನಡೆದು ಬರುತ್ತಾರೆ. ಅವರನ್ನು ಮಾತಾಡಿಸಿದಾಗ, ಆ ವ್ಯಕ್ತಿ ತಾವು ಪ್ರತಿನಿತ್ಯ ಆರೇಳು ಕಿಲೋಮೀಟರ್​ಗಳ ಕಾಲ ನಡೆಯುವುದಾಗಿ ಹೇಳುತ್ತಾರೆ.

ಈ ಸಂದರ್ಭದಲ್ಲಿ ಅನುಪಮ್ ಖೇರ್​ ಮಾಸ್ಕ್​ ತೆಗೆದರೂ, ಆ ವ್ಯಕ್ತಿಗೆ ಇವರ್ಯಾರು ಎಂಬುದು ಗೊತ್ತಾಗುವುದಿಲ್ಲ. 'ನಾನು ಅನುಪಮ್ ಖೇರ್​ ...' ಎಂದು ಪರಿಚಯಿಸಿಕೊಂಡರೂ, ಅದಕ್ಕೇನೀಗ? ಎನ್ನುವಂತೆ ಆ ವ್ಯಕ್ತಿ ಮುಗುಳ್ನಗುತ್ತಾರೆ. ಆ ವ್ಯಕ್ತಿ ತಮ್ಮನ್ನು ಗುರುತು ಹಿಡಿಯದಿರುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಅನುಪಮ್​ ಪೋಸ್ಟ್​ ಹಾಕಿದ್ದಾರೆ.

'ನಾನು 518 ಚಿತ್ರಗಳಲ್ಲಿ ನಟಿಸಿದ್ದೇನೆ ಎಂದು ಬೀಗುತ್ತಿರುತ್ತೇನೆ. ಬೇರೆ ದೇಶ ಬಿಡಿ, ಭಾರತದಲ್ಲಿ ಎಲ್ಲರಿಗೂ ನನ್ನ ಬಗ್ಗೆ ಗೊತ್ತಿದೆ ಅಂದುಕೊಂಡಿದ್ದೇನೆ. ಆದರೆ, ಗ್ಯಾನ್​ಚಂದ್​ ಬಹಳ ಮುಗ್ಧವಾಗಿ ನನ್ನ ನಂಬಿಕೆಯನ್ನು ಮುರಿದಿದ್ದಾರೆ. ನಾನ್ಯಾರೆಂದೇ ಅವರಿಗೆ ಗೊತ್ತಿಲ್ಲ. ಹೆಚ್ಚು ಬೀಗಬಾರದು ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಗೆಳೆಯ' ಎಂದು ಅವರು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net