ಸಿಹಿಸುದ್ದಿ ಕೊಡಿ ಸ್ವಾಮಿ...; ಸದ್ದು ಮಾಡದ ಸ್ಟಾರ್​ಗಳ ಮನಸ್ಸಲ್ಲೇನಿದೆ?

Stars
Published on

ಬೆಂಗಳೂರು: ಲಾಕ್​ಡೌನ್ ಹಂತಹಂತವಾಗಿ ಸಡಿಲಗೊಳ್ಳುತ್ತಿದೆ. ಮೊದಲ ಹಂತವಾಗಿ ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಒಳಾಂಗಣ ಚಿತ್ರೀಕರಣ, ಶೇ. 50ರಷ್ಟು ಹಾಜರಾತಿಗೆ ಚಿತ್ರಪ್ರದರ್ಶನ, ನಂತರ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಲಾಗುತ್ತದೆ. ಕರೊನಾ ಮೂರನೇ ಅಲೆ ಸೇರಿದಂತೆ ಹೊಸ ಸಮಸ್ಯೆ ಎದುರಾಗದಿದ್ದರೆ, ಸೆಪ್ಟೆಂಬರ್-ಅಕ್ಟೋಬರ್ ಹೊತ್ತಿಗೆ ಚಿತ್ರರಂಗ ಮುಂಚಿನ ಸ್ಥಿತಿ ಮತ್ತು ಲಯಕ್ಕೆ ವಾಪಸ್ಸಾಗುವ ನಂಬಿಕೆ ಇದೆ.

ಈ ನಡುವೆ ಅನ್​ಲಾಕ್ ಶುರುವಾಗುತ್ತಿದ್ದಂತೆಯೇ ದೊಡ್ಡ ಹೀರೋಗಳು ಯಾವಾಗಿನಿಂದ ಚಿತ್ರೀಕರಣ ಶುರು ಮಾಡಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಉಪೇಂದ್ರ ಮತ್ತು ಶಿವರಾಜಕುಮಾರ್ ಈ ತಿಂಗಳ ಕೊನೆಯಿಂದ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ. ಇನ್ನೂ ಕೆಲವರು ಆಗಸ್ಟ್​ನಿಂದ ಚಿತ್ರೀಕರಣಕ್ಕೆ ಹೊರಡಲಿದ್ದಾರೆ. ಆದರೆ, ಕೆಲವರ ವಿಚಾರದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಅವರ ಮುಂದಿನ ಚಿತ್ರ ಯಾವುದು? ಆ ತಂಡದಲ್ಲಿ ಯಾರೆಲ್ಲ ಇರುತ್ತಾರೆ? ಯಾವಾಗಿನಿಂದ ಚಿತ್ರೀಕರಣ ಪ್ರಾರಂಭವಾಗುತ್ತದೆ? ಎಂಬಂತಹ ಯಾವುದೇ ಪ್ರಶ್ನೆಗಳಿಗೂ ಇನ್ನೂ ಉತ್ತರ ಸಿಕ್ಕಿಲ್ಲ. ಆ ಉತ್ತರ ಯಾವಾಗ ಸಿಗುತ್ತದೆ ಎಂಬುದೂ ಗೊತ್ತಿಲ್ಲ.

ಪ್ರಮುಖವಾಗಿ, ನಾಲ್ಕು ಪ್ರಮುಖ ಸ್ಟಾರ್ ನಟರ ಮುಂದಿನ ನಡೆಯ ಬಗ್ಗೆ ಬರೀ ಚಿತ್ರರಂಗದಲ್ಲಷ್ಟೇ ಅಲ್ಲ, ಆ ನಟರ ಅಭಿಮಾನಿ ವಲಯದಲ್ಲೂ ದೊಡ್ಡ ಮಟ್ಟಿಗೆ ಕುತೂಹಲ ಇದೆ. ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಬಿಡುಗಡೆಗೆ ಸಿದ್ಧವಿದೆ. ‘ವಿಕ್ರಾಂತ್ ರೋಣ’ ಶೂಟಿಂಗ್ ಮುಗಿದು ಡಬ್ಬಿಂಗ್ ಹಂತದಲ್ಲಿದೆ. ಮುಂದೆ? ಗೊತ್ತಿಲ್ಲ. ಸುದೀಪ್ ಯಾವೊಂದು ಚಿತ್ರವನ್ನೂ ಒಪ್ಪಿಲ್ಲ. ಪರಭಾಷೆಗಳ ಒಂದೆರೆಡು ಚಿತ್ರಗಳಲ್ಲಿ ಅವರ ಹೆಸರು ಕೇಳಿ ಬಂದಿದೆಯಾದರೂ, ಅದಕ್ಕೂ ಅವರಿನ್ನು ಗ್ರೀನ್ ಸಿಗ್ನಲ್ ಕೊಟ್ಟ ಹಾಗಿಲ್ಲ. ಎರಡನೇ ಲಾಕ್​ಡೌನ್​ಗೂ ಮುನ್ನವೇ ದರ್ಶನ್, ‘ರಾಜವೀರ ಮದಕರಿ ನಾಯಕ’ ಚಿತ್ರದಲ್ಲಿ ನಟಿಸುತ್ತಿಲ್ಲ, ಅದರ ಬದಲು ನಿರ್ವಪಕ ರಾಕ್​ಲೈನ್ ವೆಂಕಟೇಶ್ ನಿರ್ಮಾಣದ ‘ಗೋಲ್ಡ್ ರಿಂಗ್’ ಎಂಬ ಇನ್ನೊಂದು ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಆ ‘ಗೋಲ್ಡ್ ರಿಂಗ್’ ಪ್ರಾರಂಭ ಯಾವಾಗ? ನಿರ್ದೇಶಕರ್ಯಾರು? ಯಾರೆಲ್ಲ ಇರುತ್ತಾರೆ? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇನ್ನು, ಯಶ್ ಅವರ ಮುಂದಿನ ನಡೆಯೇನು ಎಂಬ ಪ್ರಶ್ನೆ ಕಳೆದೊಂದು ವರ್ಷದಿಂದ ಇದೆ. ‘ಕೆಜಿಎಫ್ 2’ ನಂತರ ನರ್ತನ್ ನಿರ್ದೇಶನದ ಚಿತ್ರದಲ್ಲಿ ಅವರು ನಟಿಸಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೆ, ಈ ಚಿತ್ರ ಯಾವಾಗಿನಿಂದ ಶುರು? ನಿರ್ವಪಕರು ಯಾರು? ‘ಕೆಜಿಎಫ್ 2’ ಬಿಡುಗಡೆಯಾಗುವವರೆಗೂ ಈ ಚಿತ್ರ ಶುರುವಾಗುವುದಿಲ್ಲವೇ? ಈ ಗೊಂದಲಗಳು ಬಗೆಹರಿದಿಲ್ಲ. ಹಾಗೆ ನೋಡಿದರೆ, ಧ್ರುವ ಸರ್ಜಾ ಅಭಿನಯದ ಮುಂದಿನ ಚಿತ್ರದ ಬಗ್ಗೆ ಎಲ್ಲರಲ್ಲೂ ಒಂದು ಸ್ಪಷ್ಟತೆ ಇತ್ತು. ಆದರೆ, ‘ದುಬಾರಿ’ ಮುಂದಕ್ಕೆ ಹೋಗಿರುವುದರಿಂದ, ಆ ಜಾಗಕ್ಕೆ ಯಾವ ಚಿತ್ರ ಬರುತ್ತದೆ ಮತ್ತು ಯಾರು ನಿರ್ದೇಶಿಸುತ್ತಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ. ‘ದುನಿಯಾ’ ವಿಜಯ್ ವಿಷಯದಲ್ಲೂ ಈ ಗೊಂದಲ ಇದ್ದು, ‘ಸಲಗ’ ನಂತರ ಮುಂದೇನು ಎಂಬ ಪ್ರಶ್ನೆ ಹಲವರಲ್ಲಿದೆ. ಹೀಗೆ ಕನ್ನಡದ ಜನಪ್ರಿಯ ನಟರುಗಳ ಮುಂದಿನ ಚಿತ್ರ ಯಾವುದಿರಬಹುದು ಎಂಬ ಚರ್ಚೆ ಕೆಲವು ತಿಂಗಳಿನಿಂದ ನಡೆಯುತ್ತಲೇ ಇದೆ. ಆದರೆ, ಅದಕ್ಕೊಂದು ಸ್ಪಷ್ಟತೆ ಸಿಕ್ಕಿಲ್ಲ. ಸಿನಿಮಾಗಳ ವಿಚಾರವಾಗಿ ಸ್ಟಾರ್​ಗಳು ತೆರೆಮರೆಯಲ್ಲಿಯೇ ಕೆಲಸ ನಡೆಸಿದ್ದರಾದರೂ, ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ ಅಷ್ಟೇ. ಆದರೆ, ಆ ಸಮಯ ಬರೋದು ಯಾವಾಗ?

ಎಲ್ಲರ ಕೈಯಲ್ಲೂ ಎರಡ್ಮೂರು ಚಿತ್ರಗಳು

ದರ್ಶನ್, ಸುದೀಪ್, ಯಶ್ ಮತ್ತು ಧ್ರುವ ಸರ್ಜಾ ಅವರನ್ನು ಹೊರತುಪಡಿಸಿದರೆ, ಮಿಕ್ಕಂತೆ ಬೇರೆ ನಟರೆಲ್ಲರೂ ಒಂದಿಷ್ಟು ಚಿತ್ರಗಳೊಂದಿಗೆ ಬಿಜಿಯಾಗಿದ್ದಾರೆ. ‘ಜೇಮ್್ಸ’ ಅಲ್ಲದೆ, ಪುನೀತ್ ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ‘ಶಿವಪ್ಪ’ ಜತೆಗೆ ಶಿವರಾಜಕುಮಾರ್ ಕೈಯಲ್ಲಿ ‘ವೇದ’ ಮತ್ತು ಇನ್ನೂ ಒಂದು ಚಿತ್ರವಿದೆ. ‘ಕಬ್ಜ’ ಅಲ್ಲದೆ ಉಪೇಂದ್ರ ಅಭಿನಯದ ಎರಡು ಚಿತ್ರಗಳು ಶುರುವಾಗಬೇಕಿದೆ. ‘ಮದಗಜ’ ಮುಗಿಸಿ, ಶ್ರೀಮುರಳಿ ‘ಬಘೀರ’ ನಾಗಲಿದ್ದಾರೆ. ‘ಸಪ್ತ ಸಾಗರ’ ಅರ್ಧ ದಾಟಿರುವ ರಕ್ಷಿತ್, ಇನ್ನಷ್ಟು ಚಿತ್ರಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಗಣೇಶ್ ಮೂರು ಚಿತ್ರಗಳಲ್ಲಿ ಒಂದು ಸಂಪೂರ್ಣವಾಗಿದೆ. ಎರಡು ಬಾಕಿ, ಇನ್ನೆರೆಡು ಹೊಸ ಚಿತ್ರಗಳು ಗಣೇಶ್ ಬಳಿ ಇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net