

ನವದೆಹಲಿ: ಖಾಸಗಿ ಶಾಲೆಯೊಂದರ ಆವರಣದಲ್ಲಿದ್ದ ಮರದಿಂದ ಹಣ್ಣನ್ನು ಕಿತ್ತು ತಿಂದಿದ್ದಕ್ಕೆ ಬಾಲಕರಿಬ್ಬರನ್ನು ಮರಕ್ಕೆ ಕಟ್ಟಿ ಹೊಡೆದು ವ್ಯಕ್ತಿಯೊಬ್ಬ ಅತ್ಯಂತ ದುರುಳವಾಗಿ ವರ್ತಿಸಿದ್ದಾನೆ. ಆ ಮಕ್ಕಳಿಬ್ಬರು ಬೇಡಿಕೊಂಡರೂ ಕೇಳದೆ ಮೂರ್ಛೆ ಹೋಗುವವರೆಗೂ ಹೊಡೆದಿದ್ದಾನೆ.
ಉತ್ತರಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯ ಗೆಹುವಾ ಎಂಬಲ್ಲಿನ ಖಾಸಗಿ ಶಾಲೆಯ ಆವರಣದಲ್ಲಿದ್ದ ಮರದಿಂದ ಹತ್ತು ಹಾಗೂ ಹನ್ನೊಂದು ವರ್ಷದ ಇಬ್ಬರು ದಲಿತ ಬಾಲಕರು ಹಣ್ಣು ಕಿತ್ತುಕೊಂಡು ತಿಂದಿದ್ದಾರೆ. ಇದನ್ನು ನೋಡಿದ 25 ವರ್ಷದ ಕೈಲಾಸ್ ವರ್ಮಾ ಎಂಬಾತ ಅವರಿಬ್ಬರನ್ನು ಹಿಡಿದು ಮರಕ್ಕೆ ಕಟ್ಟಿ ಬಡಿದಿದ್ದಾನೆ.
ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಮಕ್ಕಳಿಬ್ಬರನ್ನು ಮರಕ್ಕೆ ಕಟ್ಟಿರುವುದನ್ನು ನೋಡಿದ ಶಾಲಾ ಮಕ್ಕಳು ಅವರ ಮನೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಇದನ್ನು ತಿಳಿದು ತಾಯಿ ಶಾಲೆಯ ಬಳಿಗೆ ಬಂದಿದ್ದಾಗ ಮರಕ್ಕೆ ಕಟ್ಟಿಹಾಕಿ ಹೊಡೆಯಲಾಗಿದ್ದ ಮಕ್ಕಳು ಮೂರ್ಛೆ ಹೋಗಿದ್ದರೆ, ಕೈಲಾಸ್ ವರ್ಮಾ ಅವರ ಮುಂದೆಯೇ ಮದ್ಯಪಾನ ಮಾಡುತ್ತಿದ್ದ.
ಘಟನೆ ಬಳಿಕ ಈ ಮಕ್ಕಳ ದಯನೀಯ ಸ್ಥಿತಿಯ ಫೋಟೋ ವೈರಲ್ ಆಗಿದ್ದು, ಆ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಂಗಳವಾರ ಕೈಲಾಸ್ನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಕೈಲಾಸ್ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದ್ದು, ಮತ್ತೊಂದೆಡೆ ದೂರು ಹಿಂದಕ್ಕೆ ಪಡೆಯುವಂತೆ ಕೈಲಾಸ್ ಕಡೆಯವರಿಂದ ಒತ್ತಡ ಬರುತ್ತಿದೆ ಎಂದು ಆ ಮಕ್ಕಳಿಬ್ಬರ ತಾಯಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)