

ಚೆನ್ನೈ: ತಮಿಳಿನ ಸೂಪರ್ಸ್ಟಾರ್ ದಳಪತಿ ವಿಜಯ್ ಇದೀಗ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಅವರು ಮಾಡಿದ ದಾಖಲೆಯನ್ನು ಭಾರತದಲ್ಲಿ ಇಲ್ಲಿಯವರೆಗೂ ಯಾವ ಸಿನಿಮಾ ಸ್ಟಾರ್ಗಳೂ ಮಾಡಿಲ್ಲ. ಬಾಲಿವುಡ್ ಘಟಾನುಘಟಿ ಸ್ಟಾರ್ಗಳಿಂದಲೂ ಅದು ಸಾಧ್ಯವಾಗಿಲ್ಲ.
ಹೌದು, ಫೆಬ್ರವರಿಯಲ್ಲಿ ಮಾಸ್ಟರ್ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ತಮಿಳುನಾಡಿನ ನೇವೇಲಿಯಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ವಿಜಯ್ ಸೆಲ್ಫಿಯೊಂದನ್ನು ಕ್ಲಿಕ್ಕಿಸಿಕೊಂಡಿದ್ದರು. ಆ ಸೆಲ್ಫಿಯೇ ಇದೀಗ ಇಲ್ಲಿಯವರೆಗೂ ಯಾರೂ ಮಾಡದ ದಾಖಲೆಯೊಂದನ್ನು ಮಾಡಿದೆ.
‘ಥ್ಯಾಂಕ್ಯು ನೇವೇಲಿ’ ಎಂದಷ್ಟೇ ಬರೆದುಕೊಂಡು, ಟ್ವಿಟರ್ನಲ್ಲಿ ಫೋಟೋ ಪೋಸ್ಟ್ ಮಾಡಿದ್ದೇ ತಡ ಬರೋಬ್ಬರಿ 3.6 ಲಕ್ಷ ಲೈಕ್ಸ್ಗಳು ಆ ಫೋಟೋಕ್ಕೆ ಬಂದಿದ್ದವು. ಒಂದೂವರೆ ಲಕ್ಷ ಬಾರಿ ರೀಟ್ವಿಟ್ ಆಗಿತ್ತು. ಟ್ವಿಟರ್ ಇಂಡಿಯಾ ಪ್ರಕಾರ ಈವರೆಗೂ ಭಾರತದ ಸಿನಿಮಾ ಸೆಲೆಬ್ರಿಟಿಯೊಬ್ಬರಿಗೆ ಸಿಕ್ಕ ಅತ್ಯುತ್ತಮ ಪ್ರತಿಕ್ರಿಯೆ ಇದಾಗಿದೆಯಂತೆ.
ಸದ್ಯ ವಿಜಯ್ ಅವರ ಮಾಸ್ಟರ್ ಸಿನಿಮಾ ಬಿಡುಗಡೆ ಸಿದ್ಧವಾಗಿದ್ದು, ಇನ್ನುಳಿದಂತೆ ಹಲವು ಸಿನಿಮಾಗಳನ್ನು ಅವರು ಒಪ್ಪಿಕೊಂಡಿದ್ದು ಆ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್)