

ಬೆಂಗಳೂರು: 'ಬಿಗ್ ಬಾಸ್ ಒಟಿಟಿ'ಯ ಮೊದಲ ಸೀಸನ್ನಲ್ಲಿ ಗಮನ ಸೆಳೆದ ಕಿರಣ್ ಯೋಗೀಶ್ವರ್ ಈಗ ಒಂದು ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮುರುಗನ ಜತೆಗೆ ಹಾಡಿ ಕುಣಿದಿದ್ದಾರೆ.
ಇದನ್ನೂ ಓದಿ: ಹಾರರ್ ಕಥೆಯಲ್ಲಿ ಅಕ್ಕ-ತಂಗಿಯಾದ ಮಿಲನಾ-ಅಮೃತಾ
ಕಳೆದ ವರ್ಷ 'ಕೊಡೆ ಮುರುಗ' ಎಂಬ ಚಿತ್ರ ಬಿಡುಗಡೆಯಾಗಿದ್ದು ನೆನಪಿರಬಹುದು. ಈ ಚಿತ್ರದಲ್ಲಿ ಅಭಿನಯಿಸುವ ಮೂಲಕ ಗುರುತಿಸಿಕೊಂಡವರು ಮುನಿಕೃಷ್ಣ. ತಮ್ಮ ಹಾವ-ಭಾವದಿಂದ ಗಮನಸೆಳೆದಿದ್ದ ಅವರು, ಈಗ ಇನ್ನೊಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದೇ 'ಮುರುಗ - ಸನ್ ಆಫ್ ಕಾನೂನು'. ವಿಜಯ ಪ್ರವೀಣ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಮುನಿಕೃಷ್ಣ ಜತೆಗೆ ಕಿರಣ್ ಕುಣಿದಿದ್ದಾರೆ.
ಇದೊಂದು ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರವಾಗಿದ್ದು, ಮಂಗಳೂರು, ಮಲ್ಪೆ, ಕಾಪು ಬೀಚ್, ಸಕಲೇಶಪುರ, ಆನೇಕಲ್ ಮತ್ತು ಬೆಂಗಳುರು ಸುತ್ತಮುತ್ತ ಚಿತ್ರಕ್ಕೆ ೩೫ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಹಳ್ಳಿಯ ಜಮೀನ್ದಾರ ಮತ್ತು ಎಲ್ಎಲ್ಬಿ ಓದಿಕೊಂಡ ಪದವಧರನ ನಡುವಿನ ಹೋರಾಟದ ಕುರಿತಾದ ಚಿತ್ರ ಇದಾಗಿದ್ದು, ಜಮೀನ್ದಾರನಾಗಿ ಶೋಭರಾಜ್ ನಟಿಸಿದ್ದಾರೆ.
ಈ ಚಿತ್ರದಲ್ಲಿ ಚಿರಶ್ರೀ ಹಾಗೂ ಮಮತಾ ರಾಹುತ್ ನಾಯಕಿಯರಾಗಿ ನಟಿಸದ್ದು, ನಾಯಕಿಯ ತಂದೆಯಾಗಿ ರಮೇಶ್ ಭಟ್ ಮತ್ತು ನಾಯಕನ ತಾಯಿಯ ಪಾತ್ರದಲ್ಲಿ ವಿನಯಾ ಪ್ರಸಾದ್ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಡಿಂಗ್ರಿ ನಾಗರಾಜ್, ಉಮೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಎಎಸ್‌ಎ ಪ್ರೊಡಕ್ಷನ್ ಮೂಲಕ ಮುನಿಕೃಷ್ಣ ಅವರೇ ನಿರ್ಮಿಸಿರುವ ಈ ಚಿತ್ರಕ್ಕೆ ದ್ವೈಪಾಯನ ಸಿಂಗ್ ಸಂಗೀತ ಸಂಯೋಜಿಸಿದ್ದು, ಶಂಕರ್ ಅವರ ಛಾಯಾಗ್ರಹಣವಿದೆ. ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಮಾಡುವುದರ ಜತೆಗೆ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.