ಹಾರರ್​ ಕಥೆಯಲ್ಲಿ ಅಕ್ಕ-ತಂಗಿಯಾದ ಮಿಲನಾ-ಅಮೃತಾ …

O
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಾರರ್​ ಚಿತ್ರಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿತ್ತು. ಈಗ ಬಹಳ ದಿನಗಳ ನಂತರ 'ಓ' ಎಂಬ ಹಾರರ್​ ಚಿತ್ರವೊಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಈ ಚಿತ್ರದಲ್ಲಿ ಮಿಲನಾ ನಾಗರಾಜ್​ ಮತ್ತು ಅಮೃತಾ ಅಯ್ಯಂಗಾರ್​ ಸಹೋದರಿಯರಾಗಿ ನಟಿಸಿದ್ದಾರೆ. ಅದೇ 'ಓ'

ಅಂದಹಾಗೆ, 'ಓ' ಚಿತ್ರವು ನಾಳೆ ನ.11ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಮಹೇಶ್ ಸಿ.ಅಮ್ಮಲ್ಲಿದೊಡ್ಡಿ ಎಂಬುವವರು ನಿರ್ದೇಶನ ಮಾಡಿದ್ದಾರೆ. ಇದುವರೆಗೂ ಬಂದಿರುವ ಎಲ್ಲಾ ಹಾರರ್ ಸಿನಿಮಾಗಳಿಗಿಂತ ತಮ್ಮದು ಬೇರೆ ತರಹದ ಚಿತ್ರ ಎನ್ನುವ ಅವರು, 'ಆರಂಭದ ೨೦ ನಿಮಿಷ ಪಾತ್ರಗಳ ಪರಿಚಯ ಮಾಡಿ. ಅಲ್ಲಿಂದ ಕೊನೆಯ ಸೀನ್‌ವರೆಗೆ ಹಾರರ್ ಕಥೆ ಸಾಗುತ್ತದೆ. ವಾಮಾಚಾರದ ಜೊತೆಗೆ ಹಾರರ್ ಅಂಶಗಳು ಈ ಚಿತ್ರದಲ್ಲಿವೆ. ನಾಯಕನಾಗಿ ಸಿದ್ದು ಮೂಲಿಮನಿ ಅಭಿನಯಿಸಿದ್ದಾರೆ. ಈ ಚಿತ್ರದ ಹಾಡೊಂದಕ್ಕೆ ಪುನೀತ್‌ ರಾಜ್‌ಕುಮಾರ್ ಅವರು ಧ್ವನಿಯಾಗಿದ್ದಾರೆ. ಕಿರಣ್ ತಲಕಾಡು ಕಥೆ ಬರೆಯುವುದರ ಜತೆಗೆ ಏಕಾಕ್ಷರ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ' ಎಂದು ಮಾಹಿತಿ ಕೊಡುತ್ತಾರೆ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ರಚಿಸಿರುವ ಮಹೇಶ್ ಸಿ.ಅಮ್ಮಲ್ಲಿದೊಡ್ಡಿ.

ಒಂದು ಮನೆಯಲ್ಲಿ ಅಕ್ಕ-ತಂಗಿಯ ನಡೆಯುವ ಕಥಾಹಂದರ ಇದಾಗಿದ್ದು, ಚಿತ್ರದಲ್ಲಿ ವಾಮಾಚಾರ ಮಾಡುವುದು ತಪ್ಪು ಎಂದು ತೋರಿಸಲಾಗಿದೆಯಂತೆ. ಒಂದೊಳ್ಳೆಯ ಸಿನಿಮಾ ಮಾಡಬೇಕೆಂಬ ಹಂಬಲದಲ್ಲಿ ಈ ಚಿತ್ರ ಮಾಡಿದ್ದು, ಹೊಸಬರಿಗೆ ಯಾರೂ ಬೆಂಬಲ ನೀಡುತ್ತಿಲ್ಲ ಎಂದು ನಿರ್ದೇಶಕರು ಬೇಸರ ವ್ಯಕ್ತಪಡಿಸುತ್ತಾರೆ.

ಈ ಜಾನರ್ ಸಿನಿಮಾ ನೋಡಲೆಂದೇ ಒಂದಷ್ಟು ಜನ ಇರ‍್ತಾರೆ ಎನ್ನುವ ಮಿಲನಾ, 'ಅಂಥವರಿಗೆ ಈ ಚಿತ್ರ ತುಂಬಾನೇ ಇಷ್ಟವಾಗುತ್ತದೆ. ಒಂದೊಳ್ಳೆಯ ಉದ್ದೇಶ ಇಟ್ಟುಕೊಂಡು ಮಾಡಿದಂಥ ಚಿತ್ರ ಇದು' ಎನ್ನುತ್ತಾರೆ. ಮತ್ತೊಬ್ಬ ನಾಯಕಿ ಅಮೃತಾ ಅಯ್ಯಂಗಾರ್ ಇಂಥ ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ನೋಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

'ಓ' ಚಿತ್ರಕ್ಕೆ ದಿಲೀಪ್ ಚಕ್ರವರ್ತಿ ಅವರ ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಅವರ ಸಂಗೀತವಿದ್ದು, ಸಂಗೀತಾ, ರಮೇಶ್ ಪಂಡಿತ್, ಸುಚೇಂದ್ರ ಪ್ರಸಾದ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net