

ಬೆಂಗಳೂರು: ಕೆಲವೇ ದಿನಗಳ ಹಿಂದಿನ ಮಾತು. ರಿಷಭ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಚಿತ್ರ 'ಕಾಂತಾರ' ಚಿತ್ರವು ಬಿಡುಗಡೆಯಾದ 25 ದಿನಗಳಲ್ಲಿ ಬರೋಬ್ಬರಿ 77 ಲಕ್ಷ ಮಂದಿ ಜನ ಚಿತ್ರಮಂದಿರಗಳಲ್ಲಿ ನೋಡಿದ್ದಾರೆ ಎಂಬ ಸುದ್ದಿಯೊಂದನ್ನು ಚಿತ್ರತಂಡದವರು ಹಂಚಿಕೊಂಡಿದ್ದರು. ಈಗ ಚಿತ್ರ ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಹಾರರ್ ಕಥೆಯಲ್ಲಿ ಅಕ್ಕ-ತಂಗಿಯಾದ ಮಿಲನಾ-ಅಮೃತಾ …
ಚಿತ್ರತಂಡದವರು ಹಂಚಿಕೊಂಡಿರುವ ಹೊಸ ಮಾಹಿತಿಯ ಪ್ರಕಾರ, 'ಕಾಂತಾರ' ಚಿತ್ರದ ಒಂದು ಕೋಟಿ ಟಿಕೆಟ್ಗಳು ಇದುವರೆಗೂ ಮಾರಾಟವಾಗಿದೆಯಂತೆ. ಇದು ಬರೀ ಕರ್ನಾಟಕದ ಲೆಕ್ಕ. ಒಟ್ಟಾರೆ, ಇದುವರೆಗೂ ಎಲ್ಲಾ ಭಾಷೆಗಳಿಂದ, ಪ್ರದೇಶಗಳಿಂದ ಎಷ್ಟು ಜನ ಚಿತ್ರ ನೋಡಿರಬಹುದು ಅಥವಾ ಎಷ್ಟು ಟಿಕೆಟ್ಳು ಮಾರಾಟವಾಗಿರಬಹುದು ಎಂಬ ಲೆಕ್ಕವನ್ನು ಚಿತ್ರತಂಡ ಇನ್ನೂ ಬಹಿರಂಗಗೊಳಿಸಿಲ್ಲ.
ಸೆ. 30ರಂದು 'ಕಾಂತಾರ' ಚಿತ್ರವು ಬಿಡುಗಡೆಯಾಗಿದ್ದು, ಈಗ ಸ್ವಲ್ಪ ಅಬ್ಬರ ಕಡಿಮೆಯಾಗಿದೆ. ಮೊದಲು ಕನ್ನಡದಲ್ಲಷ್ಟೇ ಬಿಡುಗಡೆಯಾದ ಈ ಚಿತ್ರವು, ಈಗ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ಬಿಡುಗಡೆಯಾಗಿ ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಇದುವರೆಗೂ ಒಟ್ಟಾರೆ 350 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆಯನ್ನು 'ಕಾಂತಾರ' ಮಾಡಿದೆ ಎಂದು ಹೇಳಲಾಗುತ್ತಿದೆ.
'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್ನ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ಅಭಿನಯಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.