ದೇಶದ ಪ್ರಖ್ಯಾತ ದೇವಸ್ಥಾನದಿಂದ ಖುಷ್ಬೂಗೆ ವಿಶೇಷ ಪೂಜೆ! ದೈವಿಕ ಆಶೀರ್ವಾದ ಎಂದ ಹಿರಿಯ ನಟಿ

Khushbu Sundar
Published on

ಚೆನ್ನೈ: ಹಿರಿಯ ನಟಿ ಖುಷ್ಬೂ ಸುಂದರ್ ಅವರು ಬಿಜೆಪಿಯ ವಕ್ತಾರರಾಗಿ ಹಲವಾರು ಸಮಸ್ಯೆಗಳನ್ನು ಮತ್ತು ವಿಪಕ್ಷದ ನಾಯಕರನ್ನು ದಿಟ್ಟತನದಿಂದ ಎದುರಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ತಮ್ಮ ಕೆಲಸದಿಂದ ಗಮನ ಸೆಳೆದಿರುವ ಖುಷ್ಬೂ ಅವರು ಅಪರೂಪದ ಗೌರವವೊಂದಕ್ಕೆ ಪಾತ್ರರಾಗಿದ್ದಾರೆ.

ಭಾರತದ ಪ್ರಖ್ಯಾತ ದೇವಸ್ಥಾನವೊಂದರಿಂದ ವಿಶೇಷ ಗೌರವ ಸ್ವೀಕರಿಸಿರುವುದನ್ನು ಖುಷ್ಬೂ ಅವರು ಇನ್​ಸ್ಟಾಗ್ರಾಂ ಮೂಲಕ ಶೇರ್​ ಮಾಡಿಕೊಂಡಿದ್ದಾರೆ. ಫೋಟೋವನ್ನು ಹಂಚಿಕೊಂಡಿರುವ ಖುಷ್ಬೂ, ದೇವರಿಂದ ದೈವಿಕ ಆಶೀರ್ವಾದ ಎಂದು ಬರೆದುಕೊಂಡಿದ್ದಾರೆ.

ನಾರಿ ಪೂಜೆ ಮಾಡಲು ತ್ರಿಸ್ಸೂರ್​ನ ವಿಷ್ಣುಮಯ ದೇವಸ್ಥಾನದಿಂದ ನನ್ನನ್ನು ಆಹ್ವಾನಿಸಿದ್ದು, ಅದೃಷ್ಟವಂತೆ ಎಂಬ ಭಾವನೆ ವ್ಯಕ್ತವಾಗಿದೆ. ಆಯ್ಕೆಯಾದವರನ್ನು ಮಾತ್ರ ಆಹ್ವಾನಿಸಲಾಗುತ್ತದೆ. ಸ್ವತಃ ದೇವಿಯೇ ವ್ಯಕ್ತಿಯನ್ನು ಆರಿಸುತ್ತಾಳೆ ಎಂದು ನಾನು ನಂಬಿದ್ದೇನೆ. ಇಂಥಾ ಗೌರವದೊಂದಿಗೆ ನನ್ನನ್ನು ಆಶೀರ್ವದಿಸಿದ ದೇವಸ್ಥಾನದ ಪ್ರತಿಯೊಬ್ಬರಿಗೂ ನಾನು ವಿನಮ್ರ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಮ್ಮನ್ನು ರಕ್ಷಿಸುವ ಮಹಾಶಕ್ತಿಯೊಂದಿದೆ ಎಂದು ನಂಬುವ ಮತ್ತು ಪ್ರತಿದಿನ ಪ್ರಾರ್ಥಿಸುವ ಎಲ್ಲರಿಗೂ ಅನೇಕ ಒಳ್ಳೆಯ ಸಂಗತಿಗಳು ಬರುತ್ತವೆ ಎಂದು ನನಗೆ ಖಾತ್ರಿಯಿದೆ. ಜಗತ್ತು ಉತ್ತಮ, ಸಂತೋಷ ಮತ್ತು ಶಾಂತಿಯುತ ಸ್ಥಳವಾಗಿರಲೆಂದು ನನ್ನ ಪ್ರೀತಿಪಾತ್ರರಿಗಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಖುಷ್ಬೂ ಅವರು ತಮ್ಮ ಪತಿ ಸುಂದರ್ ಸಿ ನಿರ್ದೇಶಿಸಿ, ನಟಿಸುತ್ತಿರುವ ಹೊಸ ಚಿತ್ರ 'ಅರಣ್ಮನೈ 4' ಅನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ತಮನ್ನಾ ಭಾಟಿಯಾ, ರಾಶಿ ಖನ್ನಾ, ಸಂತೋಷ್ ಪ್ರತಾಪ್, ಯೋಗಿ ಬಾಬು, ಕೋವೈ ಸರಳಾ, ಸಿಂಗಂ ಪುಲಿ, ವಿಟಿವಿ ಗಣೇಶ್, ದೆಹಲಿ ಗಣೇಶ್, ಜೆಪಿ, ವಿಚು, ಕೆಜಿಎಫ್ ರಾಮ್, ಶೇಷು, ಧೀರಜ್ ವಿಷ್ಣು ರತ್ನಂ, ಎಸ್. ನಮೋ ನಾರಾಯಣನ್ ಮತ್ತು ಮೊಟ್ಟೈ ರಾಜೇಂದ್ರನ್ ಮುಂತಾದವರ ತಾರಾಗಣವಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net