

ಬೆಂಗಳೂರು: ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಕನ್ನಡ ಚಿತ್ರರಂಗದ ಅತೀ ನಿರೀಕ್ಷಿತ ಚಿತ್ರವಾದ ಯಶ್ ಅಭಿನಯದ 'ಕೆಜಿಎಫ್ 2' ಇಂದು ದೇಶಾದ್ಯಂತ ಬಿಡುಗಡೆಯಾಗಬೇಕಿತ್ತು. ಹಾಗಂತ ಚಿತ್ರತಂಡದವರೇ ಆರು ತಿಂಗಳ ಹಿಂದೆ ಚಿತ್ರ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದರು. ಆದರೆ, ಕರೊನಾ ಮತ್ತು ಲಾಕ್ಡೌನ್ನಿಂದಾಗಿ ಇಂದು ಬಿಡುಗಡೆಯಾಗಬೇಕಿದ್ದ ಚಿತ್ರ ಅನಿರ್ಧಿಷ್ಟವಾಗಿ ಮುಂದಕ್ಕೆ ಹೋಗಿದೆ.
ಹಾಗಾದರೆ, 'ಕೆಜಿಎಫ್ 2' ಚಿತ್ರ ಯಾವಾಗ? ಇಂಥದ್ದೊಂದು ಪ್ರಶ್ನೆ ಯಶ್ ಅವರ ಅಭಿಮಾನಿಗಳಲ್ಲಿ ಇದ್ದೇ ಇದೆ. ಚಿತ್ರ ಬಿಡುಗಡೆಯಾಗುತ್ತದೋ ಗೊತ್ತಿಲ್ಲ. ಆದರೆ, ಚಿತ್ರ ಆಗ ಬಿಡುಗಡೆಯಾಗುತ್ತದೆ, ಈಗ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಮಾತ್ರ ಆಗಾಗ ಕೇಳಿ ಬರುತ್ತಲೇ ಇರುತ್ತದೆ.
ಇಂದು ಬಿಡುಗಡೆ ರದ್ಧಾದ ನಂತರ, 'ಕೆಜಿಎಫ್ 2' ಚಿತ್ರತಂಡವು ಚಿತ್ರವನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎಂದು ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಕೆಲವು ದಿನಗಳ ಹಿಂದೆ, ಚಿತ್ರವು 2021ರ ಸಂಕ್ರಾಂತಿಗೆ ಬಿಡುಗಡೆಯಾಗುತ್ತದೆ ಎಂದು ಸುದ್ದಿಯಾಗಿತ್ತು. ಈಗ ನೋಡಿದರೆ, ಸಂಕ್ರಾಂತಿಗೆ ಬಿಡುಗಡೆಯಾಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಅದಕ್ಕೆ ಕಾರಣವೂ ಇದೆ. ಈ ಮುಂಚೆ, ಸಂಜಯ್ ದತ್ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರಿಂದ ಅವರ ಬದಲು ಡ್ಯೂಪ್ ಬಳಸಿ ಆದಷ್ಟು ಬೇಗ ಚಿತ್ರೀಕರಣ ಮುಗಿಸುವುದು ಚಿತ್ರತಂಡದ ಯೋಚನೆ ಆಗಿತ್ತಂತೆ. ಆದರೆ, ಇದೀಗ ಸಂಜಯ್ ದತ್ ಅವರು ಗುಣಮುಖರಾಗಿರುವುದರಿಂದ ಮತ್ತು ನವೆಂಬರ್ನಲ್ಲಿ ಡೇಟ್ಸ್ ಕೊಟ್ಟಿರುವುದರಿಂದ, ಚಿತ್ರೀಕರಣ ನವೆಂಬರ್ಗೆ ಹೋಗಿದೆ.
ಇದಕ್ಕೂ ಮುನ್ನ, ಅಕ್ಟೋಬರ್ನಲ್ಲೇ ಚಿತ್ರೀಕರಣ ಮುಗಿಸಬೇಕೆಂಬುದು ಚಿತ್ರತಂಡದ ಐಡಿಯಾ ಆಗಿತ್ತು. ಆದರೆ, ಇದೀಗ ಖುದ್ದು ಸಂಜಯ್ ದತ್ ಅವರೇ ಚಿತ್ರೀಕರಣದಲ್ಲಿ ಭಾಗವಹಿಸುವುದಾಗಿ ತಿಳಿಸಿರುವುದರಿಂದ, ಈಗ ಚಿತ್ರ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಮುಂಚೆ ಅಕ್ಟೋಬರ್ನಲ್ಲಿ ಚಿತ್ರ ಮುಗಿಸಿ, ನವೆಂಬರ್ ಮತ್ತು ಡಿಸಂಬರ್ನಲ್ಲಿ ಬೇರೆ ಕೆಲಸಗಳನ್ನು ಮುಗಿಸಿಕೊಳ್ಳುವ ಯೋಚನೆ ಚಿತ್ರತಂಡಕ್ಕಿತ್ತಂತೆ.
ಆದರೆ, ಈಗ ಚಿತ್ರ ಮುಗಿಯುವುದೇ ನವೆಂಬರ್ ಆಗುವುದರಿಂದ, ಇನ್ನೊಂದೂವರೆ ತಿಂಗಳಲ್ಲಿ ಬೇರೆಲ್ಲಾ ಕೆಲಸ ಮುಗಿಸಿ, ಪ್ರಚಾರ ಮಾಡಿ ಬಿಡುಗಡೆ ಮಾಡುವುದು ಅಸಾಧ್ಯ ಎಂಬ ಅಭಿಪ್ರಾಯ ಚಿತ್ರತಂಡದವರಲ್ಲೇ ವ್ಯಕ್ತವಾಗಿದೆಯಂತೆ. ಹಾಗಾಗಿ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕುವುದು ಸೂಕ್ತ ಎಂಬ ಮಾತನ್ನು ಹಲವರು ಹೇಳುತ್ತಿರುವುದರಿಂದ, ಕೆಲಸಗಳೆಲ್ಲಾ ಮುಗಿದ ನಂತರ ಒಮ್ಮೆಲೇ ಚಿತ್ರದ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.