ಕಲೆಕ್ಷನ್​ನಲ್ಲಿ 'ಪುಷ್ಪ' ದಾಖಲೆಯನ್ನು ಹಿಂದಿಕ್ಕಿದ 'ಕಾಂತಾರ' …

Kantara - Pushpa
Published on

ಮುಂಬೈ: ರಿಷಭ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ 'ಕಾಂತಾರ' ಚಿತ್ರವು ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಮೇಲೆ ದಾಖಲೆ ಮಾಡುತ್ತಿದೆ. ಈಗಾಗಲೇ ಗಳಿಕೆ ವಿಷಯದಲ್ಲಿ ಬಾಲಿವುಡ್​ನ ಹಲವು ಚಿತ್ರಗಳನ್ನು ಹಿಂದಿಕ್ಕಿರುವ 'ಕಾಂತಾರ' ಚಿತ್ರವು ಇದೀಗ ಅಲ್ಲು ಅರ್ಜುನ್​ ಅಭಿನಯದ 'ಪುಷ್ಪ - ದಿ ರೈಸ್​' ಗಳಿಕೆಯನ್ನು ಹಿಂದಿಕ್ಕಿ ಹೊಸ ದಾಖಲೆ ಬರೆದಿದೆ.

'ಪುಷ್ಪ' ಚಿತ್ರದ ಹಿಂದಿ ಅವತರಣಿಕೆಯು 70 ಕೋಟಿ ರೂ.ಗಳಿಗೂಐ ಹೆಚ್ಚು ಕಲೆಕ್ಷನ್​ ಮಾಡಿತ್ತು. ಇದೀಗ, 'ಕಾಂತಾರ' ಚಿತ್ರವು 75 ಕೋಟಿ ರೂ. ಗಳಿಕೆ ಮಾಡುವ ಮೂಲಕ, 'ಪುಷ್ಪ' ಚಿತ್ರದ ಗಳಿಕೆಯನ್ನು ಹಿಂದಿಕ್ಕಿದೆಯಂತೆ. ಬರೀ 'ಪುಷ್ಪ' ಚಿತ್ರದ ಗಳಿಕೆಯಷ್ಟೇ ಅಲ್ಲ, 'ಕೆಜಿಎಫ್​ 1' ಚಿತ್ರದ ಒಟ್ಟಾರೆ ಗಳಿಕೆಯನ್ನು ಸಹ 'ಕಾಂತಾರ' ಬೀಟ್​ ಮಾಡಿದೆ.

ಬರೀ, ಹಿಂದಿ ಅವತರಣಿಕೆಯಷ್ಟೇ ಅಲ್ಲ, ಒಟ್ಟಾರೆ 'ಪುಷ್ಪ' ಚಿತ್ರವು ಎಲ್ಲ ಭಾಷೆಗಳಿಂದ 350 ಕೋಟಿ ರೂ. ಸಂಗ್ರಹಿಸಿತ್ತು ಎಂದು ಹೇಳಲಾಗುತ್ತಿದೆ. ಈಗ ಅದಕ್ಕಿಂತ ಹೆಚ್ಚು ಮೊತ್ತ ಗಳಿಸುವ ಮೂಲಕ 'ಕಾಂತಾರ' ಚಿತ್ರವು 'ಪುಷ್ಪ'ದ ಹೆಗ್ಗಳಿಕೆಯನ್ನು ಬೀಟ್​ ಮಾಡಿದೆಯಂತೆ. 'ಪುಷ್ಪ' ಚಿತ್ರವು 350.30 ಕೋಟಿ ರೂ. ಸಂಗ್ರಹಿಸಿದರೆ, 'ಕಾಂತಾರ' ಚಿತ್ರವು 350.70 ಕೋಟಿ ರೂ. ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ.

'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್​ನ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದು, ರಿಷಭ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್​, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​ ಮುಂತಾದವರು ಅಭಿನಯಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net