More

    ಕಾಂತಾರ ಕರ್ನಾಟಕದಲ್ಲಿ ಒಂದು ಕೋಟಿ ಟಿಕೆಟ್ ಮಾರಾಟ

    ಬೆಂಗಳೂರು: ಕರ್ನಾಟಕದ ಜನಸಂಖ್ಯೆ 6.61 ಕೋಟಿಯಷ್ಟಿದೆ. ಅವರಲ್ಲಿ ಪ್ರತಿ ಆರು ಜನರಲ್ಲಿ ಒಬ್ಬರು ‘ಕಾಂತಾರ’ ಚಿತ್ರವನ್ನು ನೋಡಿದ್ದಾರೆ, ಅರ್ಥಾತ್ ಒಂದು ಕೋಟಿಗೂ ಹೆಚ್ಚು ಜನ ಸಿನಿಮಾ ವೀಕ್ಷಿಸಿದ್ದಾರೆ. ಇದು ಕನ್ನಡ ಹಾಗೂ ಕರ್ನಾಟಕದ ಮಟ್ಟಿಗೆ ಹೊಸ ದಾಖಲೆಯೇ ಸರಿ. ಇನ್ನು ಇದೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ 300 ಕೋಟಿ ರೂ. ಗಳಿಕೆ ಮಾಡಿಕೊಂಡ ‘ಕಾಂತಾರ’ ನಾಗಾಲೋಟ ಇನ್ನೂ ನಿಂತಿಲ್ಲ.

    ವಾರದಿಂದ ವಾರಕ್ಕೆ ಕಲೆಕ್ಷನ್ ಹೆಚ್ಚುತ್ತಲೇ ಸಾಗಿದೆ. ಸೆ. 30ರಂದು ಕನ್ನಡದಲ್ಲಿ ತೆರೆಗೆ ಬಂದ ‘ಕಾಂತಾರ’ ನಂತರ ಎರಡು ವಾರಗಳಲ್ಲಿ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲು ಬಿಡುಗಡೆಯಾಯಿತು. ವಿಶೇಷ ಅಂದರೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲು ಚಿತ್ರಕ್ಕೆ ಉತ್ತಮ ಬೆಂಬಲ ದೊರೆತಿದೆ. ಇದುವರೆಗೆ 325 ಕೋಟಿಗೂ ಹೆಚ್ಚು ಹಣ ಗಳಿಸಿ, ‘ಕೆಜಿಎಫ್ ಚಾಪ್ಟರ್ 1’ ದಾಖಲೆ ಮುರಿದಿದೆ. ಈಗಲೂ ವಾರಾಂತ್ಯಗಳಲ್ಲಿ ಹಲವೆಡೆ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ತೆಲುಗಿನಲ್ಲಿ 55 ಕೋಟಿ ರೂ. ಬಾಚಿಕೊಂಡಿದ್ದು, ತೆಲುಗಿಗೆ ಡಬ್ ಆಗಿ ಬಿಡುಗಡೆಯಾದ ಚಿತ್ರವೊಂದು ಆ ಸಾಧನೆ ಮಾಡಿದ ಆರನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಹಾಗೆಯೇ ಹಿಂದಿ ಭಾಷೆಯಲ್ಲು ಸಹ ಇದುವರೆಗೆ 67 ಕೋಟಿ ಕಲೆಕ್ಷನ್ ಮಾಡಿಕೊಂಡಿದ್ದು, ಈಗಲೂ ವಾರಾಂತ್ಯದಲ್ಲಿ 4ರಿಂದ 5 ಕೋಟಿ ರೂ. ಬಾಚಿಕೊಳ್ಳುತ್ತಿದೆ. ತಮಿಳಿನಲ್ಲಿ ಇತ್ತೀಚೆಗಷ್ಟೇ ನಾಲ್ಕು ವಾರಗಳನ್ನು ಪೂರ್ಣಗೊಳಿಸಿದ ‘ಕಾಂತಾರ’ ಈಗಲೂ 120ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಇನ್ನು ಕನ್ನಡ ಭಾಷೆಯೊಂದರಲ್ಲೇ 150 ಕೋಟಿ ರೂ. ಗಳಿಕೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.

    500 ಕೋಟಿ ಮುಟ್ಟಿದರೂ ಆಶ್ಚರ್ಯವಿಲ್ಲ…!

    ನಟ, ನಿರ್ದೇಶಕ ರಿಷಭ್ ಶೆಟ್ಟಿ ಇನ್ನೂ ಚಿತ್ರದ ಪ್ರಚಾರ ನಿಲ್ಲಿಸಿಲ್ಲ. ಚೆನ್ನೈ, ಹೈದರಾಬಾದ್ ಸೇರಿದಂತೆ ದಕ್ಷಿಣ ಭಾರತದಲ್ಲಿ ಪ್ರಚಾರ ಪೂರ್ಣಗೊಳಿಸಿರುವ ಅವರು, ಸದ್ಯ ಉತ್ತರ ಭಾರತದಲ್ಲಿ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಮುಂಬೈ, ದೆಹಲಿ ಅಂತ ಹಲವೆಡೆ ಓಡಾಡುತ್ತಿದ್ದಾರೆ. ಮತ್ತೊಂದೆಡೆ ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತೀಯ ಸಂಸ್ಕೃತಿ ಬಗ್ಗೆ ಎಲ್ಲಿಲ್ಲದ ಕುತೂಹಲ. ಹೀಗಾಗಿ ಮುಂದಿನ ದಿನಗಳಲ್ಲಿ ಚಿತ್ರವನ್ನು ವಿದೇಶಿ ಭಾಷೆಗಳಿಗೆ ಡಬ್ ಮಾಡಿ, ಬೇರೆ ದೇಶಗಳಲ್ಲೂ ಬಿಡುಗಡೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ‘ಕಾಂತಾರ’ ಓಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಸದ್ಯಕ್ಕಿನ್ನೂ ಥಿಯೇಟರ್​ಗಳಲ್ಲಿ ಮುಂದುವರಿದಿರುವ ಅಬ್ಬರ, ಟಿವಿ ಮತ್ತು ಓಟಿಟಿ ಹಕ್ಕುಗಳನ್ನು ಸೇರಿಸಿದರೆ ‘ಕಾಂತಾರ’ ಒಟ್ಟು ಗಳಿಕೆ 500 ಕೋಟಿ ದಾಟಿದರೂ ಆಶ್ಚರ್ಯವಿಲ್ಲ ಎಂಬುದು ಅಭಿಮಾನಿಗಳ ಲೆಕ್ಕಾಚಾರ.

    ‘ಕೆಜಿಎಫ್’ ದಾಖಲೆ ಮುರಿದ ‘ಕಾಂತಾರ’

    ‘ರಾಜಕುಮಾರ’ ಚಿತ್ರ 2017ರಲ್ಲಿ ಬಿಡುಗಡೆಯಾದಾಗ 65 ಲಕ್ಷ ಮಂದಿ ಥಿಯೇಟರ್​ಗಳಲ್ಲಿ ವೀಕ್ಷಿಸಿದ್ದರು. ಅದು ಅದುವರೆಗಿನ ಹೊಂಬಾಳೆ ಫಿಲಂಸ್ ನಿರ್ವಣದ ಚಿತ್ರದ ದಾಖಲೆಯಾಗಿತ್ತು. ಬಳಿಕ 2018ರಲ್ಲಿ ಬಿಡುಗಡೆಯಾದ ‘ಕೆಜಿಎಫ್ ಚಾಪ್ಟರ್ 1’ಅನ್ನು ಬರೋಬ್ಬರಿ 75 ಲಕ್ಷ ಮಂದಿ ಬೆಳ್ಳಿತೆರೆಯಲ್ಲಿ ವೀಕ್ಷಿಸಿದ್ದರು. ನಂತರ 2022ರಲ್ಲಿ ರಿಲೀಸ್ ಆದ ‘ಕೆಜಿಎಫ್ 2’ ಚಿತ್ರವನ್ನು 72 ಲಕ್ಷ ಮಂದಿ ನೋಡಿದ್ದರು. ಆದರೆ ಈ ಎಲ್ಲ ದಾಖಲೆಗಳನ್ನು ‘ಕಾಂತಾರ’ ಕೇವಲ 25 ದಿನಗಳಲ್ಲಿಯೇ ಮುರಿದಿತ್ತು. ನಾಲ್ಕನೇ ವಾರಕ್ಕೆ ‘ಕಾಂತಾರ’ ಚಿತ್ರವನ್ನು ರಾಜ್ಯಾದ್ಯಂತ 77 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರು. ಈಗ 40 ದಿನಗಳಿಗೆ ಆ ಸಂಖ್ಯೆ ಒಂದು ಕೋಟಿ ದಾಟಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದು ಹೊಸ ದಾಖಲೆ.

    ಅಮೆರಿಕದಲ್ಲೂ ‘ಕಾಂತಾರ’ ನಾಗಾಲೋಟ

    ದೂರದ ಅಮೆರಿಕಾದಲ್ಲೂ ಕನ್ನಡದ ‘ಕಾಂತಾರ’ ಕೋಟಿ ಕೋಟಿ ಲೂಟಿ ಮಾಡಿದೆ. ಕನ್ನಡದಲ್ಲಿ ಒಂಭತ್ತು ಕೋಟಿ ಹಾಗೂ ತೆಲುಗಿನಲ್ಲಿ ಏಳು ಕೋಟಿ ರೂ. ಸೇರಿದಂತೆ ಒಟ್ಟು 16 ಕೋಟಿ ರೂ. ಗಳಿಕೆ ಮಾಡಿಕೊಂಡಿರುವ ‘ಕಾಂತಾರ’ ಈಗಲೂ ಪ್ರೇಕ್ಷಕರನ್ನು ಕೈಬೀಸಿ ಕರೆಯುತ್ತಿದೆ. ಅಮೆರಿಕಾದಲ್ಲಿ ಎರಡು ಮಿಲಿಯನ್ ಕ್ಲಬ್ ಸೇರಿರುವ ‘ಕಾಂತಾರ’ ಆ ದಾಖಲೆ ಮಾಡಿದ ದಕ್ಷಿಣ ಭಾರತದ ಎಂಟನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’, ಯಶ್ ಅಭಿಮಯದ ‘ಕೆಜಿಎಫ್ ಚಾಪ್ಟರ್ 2’, ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್ 1’, ಕಮಲ್ ಹಾಸನ್ ನಟಿಸಿರುವ ‘ವಿಕ್ರಮ್, ಮಹೇಶ್ ಬಾಬು ನಟಿಸಿರುವ ‘ಸರ್ಕಾರು ವಾರಿ ಪಾಟ’, ಪವನ್ ಕಲ್ಯಾಣ್ ಅಭಿನಯದ ‘ಭೀಮ್ಲಾ ನಾಯಕ್’ ಹಾಗು ಪ್ರಭಾಸ್ ನಟಿಸಿರುವ ‘ರಾಧೇಶ್ಯಾಮ್ ಚಿತ್ರಗಳು ಆ ಸಾಧನೆ ಮಾಡಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts