

ಬೆಂಗಳೂರು: ರೀಮೇಕ್ ಎಂಬ ಪದ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೆಚ್ಚುಹೆಚ್ಚು ಕೇಳಿಬರುತ್ತಿದೆ. ಹಾಗಂತ ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಮತ್ತೊಮ್ಮೆ ಧಾಂಗುಡಿ ಇಟ್ಟಿದೆ ಎಂದು ಭಾವಿಸಬೇಕಿಲ್ಲ. ಕನ್ನಡದ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಪರಭಾಷೆಗಳಲ್ಲಿ ರೀಮೇಕ್ ಆಗುತ್ತಿದ್ದು, ಅದರಲ್ಲೂ ಕನ್ನಡ ಚಿತ್ರಗಳಿಗೆ ತೆಲುಗಿನಲ್ಲಿ ಸಖತ್ ಡಿಮ್ಯಾಂಡ್ ಇದೆ. ಅದಕ್ಕೆ ಸರಿಯಾಗಿ, ಕಳೆದೆರೆಡು ವರ್ಷಗಳಲ್ಲಿ ಬಿಡುಗಡೆಯಾದ ನಾಲ್ಕು ಜನಪ್ರಿಯ ಚಿತ್ರಗಳು ಇದೀಗ ತೆಲುಗಿನಲ್ಲಿ ರೀಮೇಕ್ ಆಗಲು ಸಜ್ಜಾಗಿವೆ.
ಇದೇ ಮೊದಲಲ್ಲ.. ಕಳೆದ ಕೆಲವು ವರ್ಷಗಳಲ್ಲಿ ಕನ್ನಡಿಗರ ಮನಸ್ಸು ಗೆದ್ದಿದ್ದ ‘ಯೂ ಟರ್ನ್’, ‘ಮಫ್ತಿ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕಿರಿಕ್ ಪಾರ್ಟಿ’, ‘ರಾಮ ರಾಮಾ ರೇ’, ‘ಒಂದು ಮೊಟ್ಟೆಯ ಕಥೆ’ ಸೇರಿದಂತೆ ಹಲವು ಚಿತ್ರಗಳು ಬೇರೆ ಭಾಷೆಗಳಿಗೆ ರೀಮೇಕ್ ಆಗಿದ್ದವು. ಈಗ ಕಳೆದೊಂದೆರೆಡು ವರ್ಷಗಳಲ್ಲಿ ಬಿಡುಗಡೆಯಾದ ಕೆಲವು ಚಿತ್ರಗಳು ಬೇರೆ ಭಾಷೆಗಳಲ್ಲಿ ರೀಮೇಕ್ ಆಗುತ್ತಿರುವುದಷ್ಟೇ ಅಲ್ಲ, ಈಗಾಗಲೇ ಕೆಲವು ಚಿತ್ರಗಳ ಕೆಲಸ ಸಹ ಶುರುವಾಗಿದೆ.
ಪ್ರಮುಖವಾಗಿ, ‘ಆ ಕರಾಳ ರಾತ್ರಿ’ ಚಿತ್ರವನ್ನು ದಯಾಳ್ ಪದ್ಮನಾಭನ್ ತೆಲುಗಿನಲ್ಲಿ ರೀಮೇಕ್ ಮಾಡುತ್ತಿದ್ದು, ಈ ಚಿತ್ರವನ್ನು ಖ್ಯಾತ ನಿರ್ವಪಕ ಅಲ್ಲು ಅರವಿಂದ್ ನಿರ್ವಿುಸುತ್ತಿದ್ದಾರೆ. ಇಲ್ಲೊಂದು ವಿಶೇಷತೆ ಇದೆ. ಕನ್ನಡದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿಯಿಸಿದ್ದ ನವೀನ್ ಕೃಷ್ಣ ಮತ್ತು ವೀಣಾ ಸುಂದರ್, ತೆಲುಗು ಅವತರಣಿಕೆಯಲ್ಲಿ ತಮ್ಮ ಪಾತ್ರಗಳನ್ನು ಮುಂದುವರೆಸಲಿದ್ದಾರೆ.
ನಟನೆಯ ಜತೆಗೆ ನವೀನ್ ಕೃಷ್ಣ, ಸಹನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಲಿದ್ದಾರಂತೆ. ಇನ್ನು ಕನ್ನಡ ಚಿತ್ರದಲ್ಲಿ ದುಡಿದಿದ್ದ ಛಾಯಾಗ್ರಾಹಕ ರಾಕೇಶ್ ಮತ್ತು ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ತೆಲುಗು ಚಿತ್ರದಲ್ಲೂ ಕೆಲಸ ಮಾಡಲಿದ್ದಾರೆ. ತೆಲುಗಿನ ನಂತರ ಇದೇ ಚಿತ್ರವನ್ನು ತಮಿಳಿನಲ್ಲೂ ನಿರ್ದೇಶಿಸುತ್ತಿರುವುದಾಗಿ ದಯಾಳ್ ಹೇಳಿಕೊಂಡಿದ್ದಾರೆ.
ಇದಲ್ಲದೆ ಪುನೀತ್ ರಾಜಕುಮಾರ್ ನಿರ್ವಣದ ‘ಕವಲುದಾರಿ’ ಚಿತ್ರವು ತೆಲುಗಿನಲ್ಲಿ ‘ಕಪಟಧಾರಿ’ ಎಂಬ ಹೆಸರಿನಲ್ಲಿ ರೀಮೇಕ್ ಆಗುತ್ತಿದೆ. ರಿಷಿ ಮಾಡಿದ ಪಾತ್ರವನ್ನು ಸುಮಂತ್ ಮಾಡುತ್ತಿದ್ದು, ಪ್ರದೀಪ್ ಕೃಷ್ಣಮೂರ್ತಿ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಇದಲ್ಲದೆ ಆರ್.ಜೆ. ಶ್ರೀನಿ ಅಭಿನಯದ ಮತ್ತು ನಿರ್ದೇಶನದ ‘ಬೀರ್ಬಲ್’ ಚಿತ್ರವು ‘ತಿಮ್ಮರುಸು - ಅಸೈನ್ವೆುಂಟ್ ವಾಲಿ’ ಎಂಬ ಹೆಸರಿನಲ್ಲಿ ತೆಲುಗಿಗೆ ರೀಮೇಕ್ ಆಗುತ್ತಿದೆ. ಈ ಚಿತ್ರವನ್ನು ಶರಣ್ ಕೊಪ್ಪಿಶೆಟ್ಟಿ ಎನ್ನುವವರು ನಿರ್ದೇಶನ ಮಾಡುತ್ತಿದ್ದು, ಅಕ್ಟೋಬರ್ನಿಂದ ಪ್ರಾರಂಭವಾಗಲಿದೆ.
ಇದನ್ನೂ ಓದಿ: ಅಂಬೇಡ್ಕರ್ಗೆ ಕಾಂಗ್ರೆಸ್ ಸಿಂಹಾಸನ ಕೊಟ್ಟಿತ್ತೆ?
ಈ ಚಿತ್ರವನ್ನು ರೀಮೇಕ್ ಮಾಡುವುದಕ್ಕೆ ಮೊದಲು ಶ್ರೀನಿಗೆ ಆಫರ್ ಬಂದಿತ್ತಂತೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿರುವ ಅವರು, ‘ತೆಲುಗಿಗೆ ರೀಮೇಕ್ ಮಾಡುವುದಕ್ಕೆ ಬಹಳ ಬೇಡಿಕೆ ಇತ್ತು. 12 ಜನ ಈ ಚಿತ್ರ ಮಾಡುವುದಕ್ಕೆ ಮುಂದೆ ಬಂದಿದ್ದರು. ಆದರೆ, ನಾವು ಮೊದಲೇ ಕಮಿಟ್ ಆಗಿದ್ದರಿಂದ ಅವರಿಗೇ ಕೊಟ್ಟಿದ್ದೇವೆ. ರೀಮೇಕ್ ಮಾಡುವುದಕ್ಕೂ ಆಫರ್ ಬಂದಿತ್ತು. ಆದರೆ, ಅದಕ್ಕೆ ಒಪ್ಪಿಕೊಂಡರೆ ಇಲ್ಲಿ ‘ಓಲ್ಡ್ ಮಾಂಕ್’ ಚಿತ್ರದ ಪ್ಲಾನ್ಗಳೆಲ್ಲಾ ತಲೆಕೆಳಗಾಗುತ್ತದೆ ಎಂಬ ಕಾರಣಕ್ಕೆ ಒಪ್ಪಲಿಲ್ಲ. ಚಿತ್ರದ ತಮಿಳಿನ ರೀಮೇಕ್ ಹಕ್ಕುಗಳು ಸಹ ಮಾರಾಟವಾಗಿದ್ದು, ಆ ಬಗ್ಗೆ ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ’ ಎನ್ನುತ್ತಾರೆ ಅವರು.
ಇನ್ನು, ‘ಲವ್ ಮಾಕ್ಟೇಲ್’ ಚಿತ್ರವು ‘ಗುರ್ತಂದ ಶೀತಕಾಲಂ’ ಎಂಬ ಹೆಸರಿನಲ್ಲಿ ತೆಲುಗಿಗೆ ರೀಮೇಕ್ ಆಗುತ್ತಿರುವುದಷ್ಟೇ ಅಲ್ಲ, ಈಗಾಗಲೇ ಚಿತ್ರದ ಮುಹೂರ್ತ ಸಹ ಸದ್ದಿಲ್ಲದೆ ಮುಗಿದಿದೆ. ಈ ಚಿತ್ರದಲ್ಲೂ ಸತ್ಯದೇವ್ ನಾಯಕನಾಗಿ ಅಭಿನಯಿಸುತ್ತಿದ್ದು, ತೆಲುಗು ನಟನೊಬ್ಬ ಎರಡು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿರುವುದು ವಿಶೇಷ. ಕನ್ನಡದ ನಾಗಶೇಖರ್ ನಿರ್ದೇಶಿಸುತ್ತಿದ್ದು, ಈ ಚಿತ್ರದ ಮೂಲಕ ಛಾಯಾಗ್ರಾಹಕ ಸತ್ಯ ಹೆಗಡೆ ಮೊದಲ ಬಾರಿಗೆ ತೆಲುಗಿಗೆ ಹೊರಟು ನಿಂತಿದ್ದಾರೆ.
ಅಲ್ಲಿಗೆ ಕನ್ನಡದ ಚಿತ್ರಗಳಿಗೆ ತೆಲುಗಿನಲ್ಲಿ ಇದೀಗ ಭರ್ಜರಿ ಡಿಮ್ಯಾಂಡ್ ಕುದುರಿದೆ. ಸದ್ಯಕ್ಕೆ ಇಷ್ಟು ಚಿತ್ರಗಳು ರೀಮೇಕ್ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಯಾವೆಲ್ಲಾ ಸಿನಿಮಾಗಳು ರೀಮೇಕ್ ಆಗಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ.