

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕೆಲ ದಿನಗಳ ಹಿಂದಷ್ಟೇ ಹೇಮಂತ್ ಹೆಗ್ಡೆ ನಿರ್ದೇಶಿಸಿ, ನಟಿಸಿದ್ದ 'ನಮ್ ನಾಣಿ ಮದ್ವೆ ಪ್ರಸಂಗ' ಶತದಿನೋತ್ಸವ ಆಚರಿಸಿದರೆ, 'ಡೇರ್ಡೆವಿಲ್ ಮುಸ್ತಾಫಾ' 50 ದಿನಗಳನ್ನು ಪೂರೈಸಿತ್ತು. ಅದರ ಬೆನ್ನಲ್ಲೇ ಮುರುಗೇಶ್ ಕಣ್ಣಪ್ಪ ನಿರ್ದೇಶನದ 'ಅಗ್ರಸೇನಾ' ಸಿನಿಮಾ ಸಹ 50 ದಿನಗಳನ್ನು ಪೂರೈಸಿದೆ. ಇತ್ತೀಚೆಗಷ್ಟೆ ಚಿತ್ರತಂಡ ಅರ್ಧಶತಕ ಸಂಭ್ರಮ ಆಚರಿಸಿತು. ವೈಷ್ಣವಿ ಮೂವೀಸ್ ಲಾಂಛನದಲ್ಲಿ ಶ್ರೀಮತಿ ಮಮತಾ ಜಯರಾಮರೆಡ್ಡಿ ನಿರ್ಮಿಸಿರುವ ಈ ಚಿತ್ರದ ಐವತ್ತು ದಿನಗಳ ಸಂಭ್ರಮಾಚರಣೆಯಲ್ಲಿ ನಿರ್ಮಾಪಕ ಜಯರಾಮರೆಡ್ಡಿ, ಮಮತಾ ಜಯರಾಮರೆಡ್ಡಿ, ಚಿತ್ರದ ನಾಯಕ ಅಗಸ್ತ್ಯ ಬೆಳಗೆರೆ, ಮನಮೋಹನ ರೈ, ರಂಜಿತ್, ಶಶಿಧರ ಗೌಡ,ಮೀನಾಕ್ಷಿ, ಮುಂತಾದವರು ಮಾತನಾಡಿ ಯಶಸ್ಸಿನ ಸಂತಸವನ್ನು ಹಂಚಿಕೊಂಡರು. ನಿರ್ಮಾಕ ಜಯರಾಮರೆಡ್ಡಿ 'ಈ ಸಂತಸಕ್ಕೆ ಕಾರಣರಾದ ಕನ್ನಡ ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಪರದೆಯ ಹಿಂದೆ ಮುಂದೆ ದುಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಚಿತ್ರದ ಮೇನ್ ವಿಲನ್ ಮನಮೋಹನ್ ರೈ ಅವರ ಅಭಿನಯ ನಿಜಕ್ಕೂ ಅದ್ಭುತ. ಲವರ್ ಬಾಯ್ ಆಗಿ ಅಮರ್, ದಸರಾ ಬೊಂಬೆ ರಚನಾ ದಶರಥ್ ಅವರ ಅದ್ಭುತ ಅಭಿನಯದ ಜೊತೆಗೆ ನಮ್ಮ ಸಿನಿಮಾದ ಜೀವಾಳ ಎನಿಸಿಕೊಂಡಿರುವ ಸಂಗೀತ ನಿರ್ದೇಶಕ ತ್ಯಾಗರಾಜ್ ಅವರ ಕೆಲಸ ಚಿತ್ರದ ಗೆಲುವಿಗೆ ಕಾರಣವಾಗಿದೆ. ಚಿತ್ರದ ಮತ್ತೊಂದು ಹೈಲೈಟ್ ಕೃಷ್ಣಮೂರ್ತಿ ಬೆಳಗೆರೆ ಅವರ ಅದ್ಭುತ ಅಭಿನಯ' ಎಂದು ಹೇಳಿದರು.
ನಂತರ ಮಾತನಾಡಿದ ನಿರ್ಮಾಪಕಿ ಮಮತಾ ಜಯರಾಮ ರೆಡ್ಡಿ, 'ನಮ್ಮ ಸಿನಿಮಾ ಯಶಸ್ಸು ಕಂಡಿದೆ. ಈ ವರ್ಷ ಬಿಡುಗಡೆಯಾದ ೧೫೦ ಸಿನಿಮಾಗಳಲ್ಲಿ ಹೊಸಬರ ಪ್ರಯತ್ನದ ಫಲವಾದ ನಮ್ಮ ಸಿನಿಮಾ ಐವತ್ತು ದಿನದ ಗೆಲುವನ್ನು ಕಂಡಿದೆ' ಎಂದರು. ನಟ ಅಗಸ್ತ್ಯ ಬೆಳಗೆರೆ ಮಾತನಾಡಿ, 'ನಮ್ಮ ಚಿತ್ರ ಜೂನ್ ೨೩ಕ್ಕೆ ಬಿಡುಗಡೆಯಾಗಿತ್ತು. ಚಿತ್ರದ ಯಶಸ್ಸಿಗೆ ಪ್ರತಿಯೊಬ್ಬರೂ ನೀಡಿದ ಸಹಕಾರವೇ ಕಾರಣ, ನಾಲ್ಕು ವರ್ಷ ತಪಸ್ಸು ಮಾಡಿ ಈ ಸಿನಿಮಾ ಮಾಡಿದ್ದೇನೆ.
ಸಂಗೀತ ನಿರ್ದೇಶಕ, ಛಾಯಾಗ್ರಾಹಕ ಸೇರಿದಂತೆ ಪ್ರತಿಯೊಬ್ಬರ ಶ್ರಮ ಚಿತ್ರದ ಗೆಲುವಿಗೆ ಕಾರಣವಾಗಿದೆ. ನಿರ್ಮಾಪಕರು ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದಾರೆ. ನಮ್ಮನ್ನೆಲ್ಲ ಇಲ್ಲಿವರೆಗೆ ಕರೆದುಕೊಂಡು ಬಂದಿದ್ದಾರೆ' ಎಂದು ಹೇಳಿದರು. ಕಾರಣಾಂತರಗಳಿಂದ ನಾಯಕ ಅಮರ್ ವಿರಾಜ್ ಬಂದಿರಲಿಲ್ಲ. ಅನಾರೋಗ್ಯದ ಕಾರಣ ನಿರ್ದೇಶಕ ಮುರುಗೇಶ್ ಕಣ್ಣಪ್ಪ ಕೂಡ ಬಂದಿರಲಿಲ್ಲ, ಆದರೆ ಅವರು ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು. ವೇದಿಕೆಮೇಲೆ ಚಿತ್ರದಲ್ಲಿ ದುಡಿದ ಕಲಾವಿದ, ತಂತ್ರಜ್ಞರಿಗೆ ಸ್ಮರಣ ಫಲಕಗಳನ್ನು ವಿತರಿಸಲಾಯಿತು.