

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಕಂಗನಾ ರಣಾವತ್ ಬಾಲಿವುಡ್ ಮಾಫಿಯಾ ಬಗ್ಗೆ ಅಲ್ಲಿನ ಕಳ್ಳಾಟಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಹೆಸರಿನಲ್ಲಿ ಅಕೌಂಟ್ ಇಲ್ಲದಿದ್ದರೂ, ಟೀಮ್ ಕಂಗನಾ ಹೆಸರಿನ ಒಂದು ಖಾತೆ ಇದೆ. ಅದು ಅವರ ಪ್ರಚಾರ ತಂಡದ ಖಾತೆ. ಈ ಖಾತೆಯ ಮೂಲಕ ಕಂಗನಾ ಇತ್ತೀಚೆಗೆ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ನನಗೆ ರಾಜಕೀಯ ಸೇರುವ ಯೋಚನೆ ಇಲ್ಲ: ಕಂಗನಾ ರಣಾವತ್
ಇತ್ತೀಚೆಗೆ ಬಾಲಿವುಡ್ ಮಾಫಿಯಾ ಬಗ್ಗೆ ಸ್ವಲ್ಪ ಜಾಸ್ತಿಯೇ ಮಾತಾಡುತ್ತಿರುವ ಅವರು, ಹಲವರನ್ನು ಎದುರು ಹಾಕಿಕೊಂಡಿದ್ದಾರೆ. ಈಗ ಅದೇ ಕಾರಣಕ್ಕೆ, ತಮ್ಮ ಅಕೌಂಟ್ ಸಸ್ಪೆಂಡ್ ಆಗುವ ಸಾಧ್ಯತೆ ಇದೆ ಎಂಬ ಗುಮಾನಿ, ಕಂಗನಾ ಅವರಿಗಿದೆ. ಅಷ್ಟೇ ಅಲ್ಲ, ಬಾಲಿವುಡ್ನಲ್ಲಿ ಒಂದು ವರ್ಗದ ಜನ ತಮ್ಮ ಖಾತೆ ಸಸ್ಪೆಂಡ್ ಮಾಡಿಸುವುದಕ್ಕೆ ಸಂಚು ರೂಪಿಸುತ್ತಿದೆ ಎಂದು ಅವರಿಗೆ ಅನಿಸಿದೆ.
ಈ ಕುರಿತು ಅದೇ ಟೀಂ ಕಂಗನಾ ಅಕೌಂಟ್ನಲ್ಲಿ ತಮ್ಮ ಅನುಮಾನ ವ್ಯಕ್ತಪಡಿಸಿರುವ ಅವರು, ಯಾವುದೇ ಕ್ಷಣದಲ್ಲಿ ಬೇಕಾದರೂ ತಮ್ಮ ಅಕೌಂಟ್ ಸಸ್ಪೆಂಡ್ ಆಗಬಹುದು ಎಂದು ಹೇಳಿದ್ದಾರೆ. ಅಲ್ಲಿಯವರೆಗೂ ತಾವು ಬಾಲಿವುಡ್ನ ಬಣ್ಣವನ್ನು ಬಯಲು ಮಾಡುತ್ತಲೇ ಇರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಬಾಲಿವುಡ್ ಮಾಫಿಯಾ ಬಗ್ಗೆ ನಾನು ಮಾತನಾಡುತ್ತಿರುವುದು ನನ್ನ ಅನೇಕ ಸ್ನೇಹಿತರಿಗೆ ಸರಿ ಬರುತ್ತಿಲ್ಲ. ಅವರು ನನ್ನ ಅಕೌಂಟ್ ಸಸ್ಪೆಂಡ್ ಮಾಡಿಸುವುದಕ್ಕೆ ಎಲ್ಲಾ ತರಹದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನನಗೆ ಗೊತ್ತು, ಸೋಷಿಯಲ್ ಮೀಡಿಯಾದಲ್ಲಿ ನಾನು ಹೆಚ್ಚು ದಿನ ಇರುವುದಿಲ್ಲ ಎಂದು. ಏಕೆಂದರೆ, ನನ್ನ ಅಕೌಂಟ್ ಯಾವ ಕ್ಷಣ ಬೇಕಾದರೂ ಸಸ್ಪೆಂಡ್ ಆಗಬಹುದು. ನನ್ನ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುವುದಕ್ಕೆ ಇನ್ನೂ ಸಾಕಷ್ಟಿದೆ. ಎಲ್ಲಿಯವರೆಗೂ ನನ್ನ ಅಕೌಂಟ್ ಇರುತ್ತದೋ, ಅಲ್ಲಿಯವರೆಗೂ ಅವರ ಬಣ್ಣ ಬಯಲು ಮಾಡುವುದಕ್ಕೆ ಪ್ರಯತ್ನ ಮಾಡುತ್ತೇನೆ' ಎಂದು ಕಂಗನಾ ಹೇಳಿದ್ದಾರೆ.